ADVERTISEMENT

ಬಸ್‌, ರೈಲು ಪ್ರಯಾಣಿಕರಿಗೆ ‘ಮತ್ಸ್ಯ ಸಿರಿ ಖಾದ್ಯ’

ಮೀನುಗಾರಿಕೆ ಕಾಲೇಜಿನಿಂದ ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಆಹಾರ

ಚಿದಂಬರ ಪ್ರಸಾದ್
Published 20 ಅಕ್ಟೋಬರ್ 2020, 2:53 IST
Last Updated 20 ಅಕ್ಟೋಬರ್ 2020, 2:53 IST

ಮಂಗಳೂರು: ಜನಸಾಮಾನ್ಯರು, ಮಕ್ಕಳು, ವಲಸೆ ಕಾರ್ಮಿಕರು ಸೇರಿದಂತೆ ಮುಖ್ಯವಾಗಿ ಬಸ್‌ ಹಾಗೂ ರೈಲ್ವೆ ಪ್ರಯಾಣಿಕರಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ನಗರದ ಮೀನುಗಾರಿಕಾ ಕಾಲೇಜು ಕಡಿಮೆ ಖರ್ಚಿನಲ್ಲಿ ಜೋಳ, ಅಕ್ಕಿ ಹಾಗೂ ರಾಗಿ ರೊಟ್ಟಿ ಜತೆ ಮೀನಿನ ಉತ್ಪನ್ನವನ್ನು ಸಿದ್ಧಪಡಿಸಿದೆ.

ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಮೀನು ಪ್ರಿಯರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಆಹಾರ ಒದಗಿಸುವ ಈ ‘ಮತ್ಸ ಸಿರಿ ಖಾದ್ಯ’ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಕಾಂಬೋ ಪ್ಯಾಕ್‌ನಲ್ಲಿ ಅಕ್ಕಿ, ಜೋಳ ಹಾಗೂ ರಾಗಿ ರೊಟ್ಟಿ ಜತೆ ಸಿಗಡಿ ಚಟ್ನಿ ಹಾಗೂ ಸಿಗಡಿ ಉಪ್ಪಿನಕಾಯಿ ಹಾಗೂ ಮೀನಿನ ಚಿಪ್ಸ್ ಒಳಗೊಂಡಿರುತ್ತದೆ. ಪ್ರತ್ಯೇಕ ಪ್ಯಾಕೆಟ್‌ ಕೂಡಾ ಇರಲಿದೆ.

ಕೋವಿಡ್‌–19 ಸಂದರ್ಭದಲ್ಲಿ ಪ್ರಯಾಣದ ವೇಳೆ ಸುರಕ್ಷತೆ ಹಾಗೂ ಆರೋಗ್ಯಕರ ಆಹಾರವನ್ನು ಕಡಿಮೆ ಖರ್ಚಿನಲ್ಲಿ ಒದಗಿಸಬೇಕೆಂಬ ನಿಟ್ಟಿನಲ್ಲಿ ಕಾಲೇಜಿನಿಂದ ಈ ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಕರಾವಳಿ ಸೇರಿದಂತೆ ರಾಜ್ಯದ ಕೆಎಸ್‌ಆರ್‌ಟಿಸಿ ಹಾಗೂ ರೈಲ್ವೆ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಈ ಆಹಾರವನ್ನು ಸಿದ್ಧಪಡಿಸಲಾಗಿದೆ.

ADVERTISEMENT

ರಾತ್ರಿ ಪ್ರಯಾಣದ ವೇಳೆ ರೆಸ್ಟೊರೆಂಟ್, ಹೋಟೆಲ್‌ಗಳಿಗೆ ಹೋಗಲು ಹಿಂಜರಿಯುವವರೇ ಹೆಚ್ಚು. ವಲಸೆ ಕಾರ್ಮಿಕರು ಹಣದ ಜತೆಗೆ ಪೌಷ್ಟಿಕ ಆಹಾರದಿಂದಲೂ ವಂಚಿತರಾಗುತ್ತಿದ್ದಾರೆ. ಆ ಕಾರಣದಿಂದ ಪ್ಯಾಕೆಟ್‌ಗೆ ಕನಿಷ್ಠ ದರದಲ್ಲಿ ದೊರೆಯಬಹುದಾದ ಈ ಉತ್ಪನ್ನ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಸೆಂಥಿಲ್ ವೇಲ್.

ಇದು ಮುಂದೆ ಗೃಹೋದ್ಯಮಕ್ಕೂ ಒತ್ತು ನೀಡಲಿದೆ. ಸದ್ಯ ಉದ್ಯೋಗದ ಜತೆಗೆ ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಆಹಾರವೂ ಅಗತ್ಯವಾಗಿದೆ. ಈಗಾಗಲೇ ಮೀನುಗಾರಿಕಾ ಕಾಲೇಜಿನಿಂದ ಉಪ್ಪಿನಕಾಯಿ, ಚಟ್ನಿ ತಯಾರಿಕೆ ಮಾಡಲಾಗುತ್ತಿತ್ತು. ಇದೀಗ ರೊಟ್ಟಿಯ ಜತೆಗೆ ಈ ಉತ್ಪನ್ನವನ್ನು ತಯಾರು ಮಾಡಲಾಗುತ್ತಿದೆ.

ಮಂಗಳವಾರ ಮಾರುಕಟ್ಟೆಗೆ

ಆಹಾರದ ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಸದ್ಯ ಕಾಲೇಜಿನ ವತಿಯಿಂದ ಸೀಮಿತ ಪ್ರಮಾಣದಲ್ಲಿ ಉತ್ಪನ್ನ ತಯಾರು ಮಾಡಲಾಗುತ್ತಿದೆ. ಕಾಲೇಜು ಸಿದ್ಧಪಡಿಸಿದ ಈ ಖಾದ್ಯವನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ ಎಂದು ಮೀನುಗಾರಿಕೆ ಕಾಲೇಜಿನ ಡೀನ್‌ ಡಾ.ಸೆಂಥಿಲ್‌ ವೇಲ್‌ ತಿಳಿಸಿದರು.

ಕೆಎಫ್‌ಡಿಸಿಯ 40 ಮಳಿಗೆಗಳಲ್ಲಿ ಮೀನುಗಾರಿಕಾ ಕಾಲೇಜಿನ ‘ಮತ್ಸ್ಯಸಿರಿ ಖಾದ್ಯ’ ಸರಬರಾಜು ಮಾಡಲಾಗುವುದು. ಇದೇ 21ರಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ಖಾದ್ಯವನ್ನು ಸಾಂಕೇತಿಕವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದ್ದಾರೆ.ಒಂದು ವಾರದಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿದು ಕೆಎಫ್‌ಡಿಸಿಯ ಮಳಿಗೆಗಳಿಗೆ ಉತ್ಪನ್ನದ ಪ್ಯಾಕೆಟ್‌ಗಳು ಪೂರೈಕೆ ಆಗಲಿವೆ. ನಂತರ ಜನರಿಗೂ ಲಭ್ಯವಾಗಲಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.