ADVERTISEMENT

Mangaluru University | ಮೌಲ್ಯಮಾಪನ ಮುಗಿದ 24 ತಾಸುಗಳಲ್ಲಿ ಫಲಿತಾಂಶ ಪ್ರಕಟ

ಎಂಸಿಎ ಫಲಿತಾಂಶ ಪ್ರಕಟಿಸಿದ ಮಂಗಳೂರು ವಿ.ವಿ.

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 5:22 IST
Last Updated 8 ನವೆಂಬರ್ 2023, 5:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ಮೌಲ್ಯಮಾಪನ ಪೂರ್ಣಗೊಂಡ 24 ತಾಸುಗಳಲ್ಲಿ ಎಂಸಿಎ ‍ಕೋರ್ಸ್‌ ಫಲಿತಾಂಶ ಪ್ರಕಟಿಸಿದೆ.

ಎಂಸಿಎ ಕೋರ್ಸ್‌ನ ಅಂತಿಮ ಪರೀಕ್ಷೆ ಅಕ್ಟೋಬರ್ 25ರಂದು ಆರಂಭವಾಗಿ ನವೆಂಬರ್ 4ಕ್ಕೆ ಮುಕ್ತಾಯಗೊಂಡಿದೆ. ಎರಡು ದಿನಗಳಲ್ಲಿ ಮೌಲ್ಯಮಾಪನ ಪೂರ್ಣಗೊಳಿಸಿದ ವಿ.ವಿ, ಮಂಗಳವಾರ ಎಲ್ಲ 30 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದೆ.

ADVERTISEMENT

‘ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲು ಆನ್‌ಲೈನ್ ಮೂಲಕ ಪ್ರಶ್ನೆಪತ್ರಿಕೆಯನ್ನು ಸಂಬಂಧಪಟ್ಟ ಕಾಲೇಜಿಗೆ ಕಳುಹಿಸಲಾಗಿತ್ತು. ಅಲ್ಲಿ ಅವನ್ನು ಮುದ್ರಿಸಿ, ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಆಯಾ ದಿನದ ಉತ್ತರ ಪತ್ರಿಕೆಗಳನ್ನು ಅದೇ ದಿನ ವಿ.ವಿ.ಗೆ ತಲುಪಿಸಲು ಸೂಚಿಸಲಾಗಿತ್ತು. ಇದರಿಂದ ಉತ್ತರ ಪತ್ರಿಕೆಗಳ ಕೋಡಿಂಗ್ ಮಾಡಲು ಅನುಕೂಲವಾಯಿತು’ ಎಂದು ವಿ.ವಿ. ಪರೀಕ್ಷಾಂಗ ಕುಲಸಚಿವ ರಾಜು ಕೃಷ್ಣ ಚಲ್ಲಣ್ಣನವರ್ ತಿಳಿಸಿದರು.

‘ಎಲ್ಲ ವಿಷಯಗಳ ಪರೀಕ್ಷೆಗಳು ಮುಗಿದ ಮರುದಿನದಿಂದಲೇ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಮೌಲ್ಯಮಾಪನ ನಡೆಸಲಾಗಿದೆ. ಪ್ರಾಧ್ಯಾಪಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಪಿಜಿ ಕೋರ್ಸ್‌ಗಳ ಪರೀಕ್ಷೆಗಳಿಗೆ ಇದೇ ಮಾದರಿ ಅನುಸರಿಸಲು ಯೋಚಿಸಲಾಗಿದೆ. ಪದವಿ ಹಂತದಲ್ಲೂ ಆನ್‌ಲೈನ್ ಪ್ರಶ್ನೆಪತ್ರಿಕೆ ನೀಡುವ ಕ್ರಮ ಅನುಷ್ಠಾನಗೊಳಿಸುವ ಯೋಚನೆ ಇದೆ. ಪದವಿ ಕಾಲೇಜುಗಳಲ್ಲಿ ಉತ್ತಮ ಇಂಟರ್‌ನೆಟ್ ವ್ಯವಸ್ಥೆ ಹಾಗೂ ಝೆರಾಕ್ಸ್ ಯಂತ್ರಗಳ ಲಭ್ಯತೆ ಸಾಧ್ಯವಾದರೆ, ಈ ಮಾದರಿ ಯಶಸ್ವಿಯಾಗುತ್ತದೆ. ಸಂಸ್ಕೃತ ವಿ.ವಿ. ನಂತರ, ರಾಜ್ಯದಲ್ಲಿ ಆನ್‌ಲೈನ್ ಪ್ರಶ್ನೆಪತ್ರಿಕೆ ‍ಪೂರೈಕೆ ವ್ಯವಸ್ಥೆಯನ್ನು (ಒಕ್ಯೂಪಿಡಿಎಸ್‌) ಜಾರಿಗೊಳಿಸಿದ ವಿಶ್ವವಿದ್ಯಾಲಯ ನಮ್ಮದಾಗಿದೆ’ ಎಂದು ವಿವರಿಸಿದರು. 

‘ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯಡಿ (ಯುಯುಸಿಎಂಸ್) ವಿದ್ಯಾರ್ಥಿಗಳ ದಾಖಲಾತಿ, ಪರೀಕ್ಷೆ, ಫಲಿತಾಂಶ, ಇನ್ನಿತರ ಕಾರ್ಯನಿರ್ವಹಣೆ ನಡೆಯುತ್ತದೆ. ಈ ಹಿಂದೆ ತಂತ್ರಾಂಶದಲ್ಲಿದ್ದ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಪದವಿ ಹಂತದಲ್ಲಿ ಕೆಲವು ಸೆಮಿಸ್ಟರ್‌ಗಳ ಫಲಿತಾಂಶ ವಿಳಂಬವಾಗಿತ್ತು. ಈಗ ತಾಂತ್ರಿಕ ಸಮಸ್ಯೆ ನಿವಾರಣೆಯಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.