ADVERTISEMENT

ಮಂಗಳೂರು: ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ ಪಾಲಿಕೆ

ದಸರಾ ಬ್ಯಾನರ್‌ಗೆ: ಪಾಲಿಕೆ ಕಂಬದಿಂದ ವಿದ್ಯುತ್‌ ಅಕ್ರಮ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 4:39 IST
Last Updated 26 ಸೆಪ್ಟೆಂಬರ್ 2024, 4:39 IST
   

ಮಂಗಳೂರು: ನಗರದಾದ್ಯಂತ ದಸರಾ ಹಬ್ಬದ ಪ್ರಯುಕ್ತ ಶುಭಕೋರುವ ಅನಧಿಕೃತ ಫ್ಲೆಕ್ಸ್ ಬ್ಯಾನರ್‌ಗಳ ಅಲಂಕಾರ ಮಾಡಲು ಪಾಲಿಕೆ ಅಳವಡಿಸಿರುವ ಕಂಬ ಮತ್ತು ವಿದ್ಯುತ್‌ ಸಂಪರ್ಕದಿಂದ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವುದು ಕಂಡು ಬಂದಿದೆ. ಇಂತಹ ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಿ ದಂಡ ವಿಧಿಸಲಾಗುತ್ತದೆ ಎಂದು ಪಾಲಿಕೆ ಎಚ್ಚರಿಸಿದೆ.

ನವರಾತ್ರಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಮುಖ್ಯ ರಸ್ತೆಗಳ ಪಕ್ಕದಲ್ಲಿ ಬ್ಯಾನರ್‌ಗಳನ್ನು ಅಳವಡಿಸಿ ಶುಭಕೋರುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬರುತ್ತಿದೆ. ಪಾಲಿಕೆಯು ಕೂಡಾ ದಸರಾ ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ವಿದ್ಯುದ್ದೀಪಗಳಿಂದ ಬೀದಿಗಳನ್ನು ಅಲಂಕರಿಸುತ್ತದೆ. ದಸರಾ ಮುಗಿಯುವವರೆಗೂ ಸುಮಾರು ಎರಡು ವಾರ ಕಾಲ ಈ  ಬೀದಿ ಅಲಂಕಾರ, ಫ್ಲೆಕ್ಸ್‌ ಬ್ಯಾನರ್‌ಗಳು ಹಾಗೆಯೇ ಇರುತ್ತವೆ.

‘ಈ ವೇಳೆ ಕೆಲವು ಖಾಸಗಿ ವ್ಯಕ್ತಿಗಳು ಅಳವಡಿಸಿರುವ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳಿಗೆ ಪಾಲಿಕೆಯ ಕಂಬದಿಂದ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ. ಅವರಿಗೆ ದಂಡ ವಿಧಿಸುತ್ತೇವೆ. ಏನಾದರೂ ಅವಘಡ ಸಂಭವಿಸಿದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತೇವೆ’ ಎಂದು ಪಾಲಿಕೆ ಆಯುಕ್ತ ಸಿ.ಎಲ್.ಆನಂದ್‌  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.