ADVERTISEMENT

ವಿದ್ಯುತ್‌ ದರ ₹1.38 ಹೆಚ್ಚಳಕ್ಕೆ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 12:57 IST
Last Updated 7 ಫೆಬ್ರುವರಿ 2019, 12:57 IST

ಮಂಗಳೂರು: ವಿದ್ಯುತ್ ಖರೀದಿ ದರ ಹೆಚ್ಚಳ ಹಾಗೂ ನಿರ್ವಹಣೆಯಲ್ಲಿ ಆಗುತ್ತಿರುವ ವೆಚ್ಚಗಳನ್ನು ಸರಿದೂಗಿಸುವ ಉದ್ದೇಶದಿಂದ ಪ್ರತಿ ಯೂನಿಟ್‌ಗೆ ₹1.38 ರಷ್ಟು ದರ ಹೆಚ್ಚಿಸುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್‌. ಮನವಿ ಮಾಡಿದರು.

2019–20 ರಲ್ಲಿ ಮೆಸ್ಕಾಂಗೆ ಒಟ್ಟು₹3,447.12 ಕೋಟಿ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ. ಅದಾಗ್ಯೂ ₹706.39 ಕೋಟಿ ಕೊರತೆ ಉಂಟಾಗಲಿದೆ. ಇದನ್ನು ಸರಿಪಡಿಸಲು ವಿದ್ಯುತ್‌ ದರ ಹೆಚ್ಚಿಸಬೇಕು ಎಂದರು.

ಮೆಸ್ಕಾಂನಿಂದ ಪ್ರತಿ ಯೂನಿಟ್‌ಗೆ ₹₹6.60 ದರ ಆಕರಿಸಲಾಗುತ್ತಿದೆ. ಆದರೆ, ಪ್ರತಿ ಯೂನಿಟ್‌ ವಿದ್ಯುತ್‌ ಪೂರೈಕೆಗೆ ₹7.96 ವೆಚ್ಚವಾಗುತ್ತಿದೆ. 2018–19 ರಲ್ಲಿ ಮೆಸ್ಕಾಂ 5006.39 ದಶಲಕ್ಷ ಯೂನಿಟ್‌ ವಿದ್ಯುತ್‌ ಅನ್ನು ಪೂರೈಕೆ ಮಾಡಲಾಗಿದ್ದು, 2019–20 ರಲ್ಲಿ ಇದು 5,134.92 ದಶಲಕ್ಷ ಯೂನಿಟ್‌ಗೆ ಏರಿಕೆಯಾಗಲಿದೆ ಎಂದು ತಿಳಿಸಿದರು.

ADVERTISEMENT

ಸೌಭಾಗ್ಯ ಯೋಜನೆಯಡಿ ಒಟ್ಟು 5,716 ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗುತ್ತಿದೆ. ಇದಕ್ಕಾಗಿ ₹18.20 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅತ್ತಾವರ ಹಾಗೂ ಶಿವಮೊಗ್ಗ ನಗರ ಉಪವಿಭಾಗಗಳಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ 11 ಕೆ.ವಿ. ಮತ್ತು ಎಲ್‌ಟಿ ವಿದ್ಯುತ್ ಮಾರ್ಗಗಳಲ್ಲಿ ಭೂಗತ ಕೇಬಳ ಅಳವಡಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮೆಸ್ಕಾಂಗೆ ಬರುವ ಆದಾಯದ ಬಹುಪಾಲನ್ನು ವಿದ್ಯುತ್‌ ಖರೀದಿಗೆ ವೆಚ್ಚ ಮಾಡಲಾಗುತ್ತಿದೆ. ವಿದ್ಯುತ್ ಖರೀದಿಗೆ ₹2,508.01 ಕೋಟಿ, ನೌಕರರ ವೇತನ ₹355.68 ಕೋಟಿ, ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚ ₹132.99 ಕೋಟಿ, ಬಡ್ಡಿ ₹133.18 ಕೋಟಿ, ಸವಕಳಿಗೆ ₹90.39 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಗ್ರಾಹಕರ ಸೇವಾ ಕೇಂದ್ರದ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರ ಅಗತ್ಯಕ್ಕೆ ಸೇವೆ ನೀಡಲು ಮೆಸ್ಕಾಂ ಬದ್ಧವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.