ADVERTISEMENT

ವಿದ್ಯುತ್‌ ಮಾಪಕ ರೀಡರ್ ಕೈಬಿಡದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 16:17 IST
Last Updated 30 ಜುಲೈ 2020, 16:17 IST
ಮಂಗಳೂರಿನ ಮೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು
ಮಂಗಳೂರಿನ ಮೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು   

ಮಂಗಳೂರು: ಲಾಕ್‌ಡೌನ್ ಅನ್ನು ಕೇಂದ್ರ, ರಾಜ್ಯ ಸರ್ಕಾರಗಳು ದುರುಪಯೋಗ ಮಾಡಿಕೊಂಡು, ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿವೆ. ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಲ್ಲಿ ಮೀಟರ್ ರೀಡರ್ ಆಗಿ ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ಬೀದಿಪಾಲು ಮಾಡಲು ಹೊರಟಿರುವುದು ಖಂಡನೀಯ ಎಂದು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (ಸಿಐಟಿಯು) ವತಿಯಿಂದ ಗುತ್ತಿಗೆ ಆಧಾರಿತ ಮಾಪಕ ರೀಡರ್‌ ಅನ್ನು ಕೆಲಸದಿಂದ ಕೈಬಿಡುವ ತೀರ್ಮಾನದ ವಿರುದ್ಧ ಮೆಸ್ಕಾಂ ಕೇಂದ್ರ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕ ಫೆಡರೇಷನ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ. ಮಾತನಾಡಿ, ‘ಮೆಸ್ಕಾಂ ವ್ಯಾಪ್ತಿಯಲ್ಲಿ ಮೀಟರ್ ರೀಡಿಂಗ್ ಮಾಡುತ್ತಿದ್ದ ಗುತ್ತಿಗೆ ನೌಕರರನ್ನು ಏಕಾಏಕಿ ಕೈಬಿಡುವ ಮೂಲಕ ರಾಜ್ಯ ಸರ್ಕಾರ ಅನ್ನದ ಬಟ್ಟಲಿಗೆ ಕಲ್ಲು ಹಾಕುವ ನೀಚ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

ADVERTISEMENT

ರಾಜ್ಯ ಘಟಕದ ಕಾರ್ಯದರ್ಶಿ ಸಮಿತ್ ಸುಳ್ಯ ಮಾತನಾಡಿದರು. ರೀಡರ್‌ ಅವರನ್ನು ಕೆಲಸದಿಂದ ಕೈಬಿಡಬಾರದು, ಏಪ್ರಿಲ್‌ನಿಂದ ತಡೆಹಿಡಿದಿರುವ ವೇತನ ಪಾವತಿಸಬೇಕು, ಈಗಿರುವ ಕೆಲಸದ ಅವಧಿ ವಿಸ್ತರಿಸಬಾರದು, ಈಗಿರುವ ವೇತನವನ್ನು ಕಡಿತಗೊಳಿಸಬಾರದು, ಗುತ್ತಿಗೆದಾರರ ಕಿರುಕುಳ ನಿಲ್ಲಿಸಬೇಕು ಎಂದು ಒತ್ತಾಯಿಸಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ ಆರ್‌. ಅವರಿಗೆ ಮನವಿ ಸಲ್ಲಿಸಲಾಯಿತು.

ಸಿಐಟಿಯು ಮುಖಂಡ ಶೇಖರ್ ಲಾಯಿಲ, ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕ ಫೆಡರೇಷನ್ ಮೆಸ್ಕಾಂ ವ್ಯಾಪ್ತಿಯ ಮುಖಂಡರಾದ ಪ್ರಕಾಶ್ ಧರ್ಮಸ್ಥಳ, ಲೋಕೇಶ್ ಹೆಬ್ಬಾರ್, ಮೋಹನ್ ನಾಯ್ಕ, ಕೇಶವ ನಾಯ್ಕ, ಗೋಪಾಲಕೃಷ್ಣ ಪ್ರಭು, ಜಯರಾಮ ಬಂಟ್ವಾಳ, ಅಶೋಕ ಶೇರಿಗಾರ್ ಉಡುಪಿ, ಚಂದ್ರಶೇಖರ ಹೆಬ್ರಿ, ಉದಯ ಕುಮಾರ್ ಕಡಬ, ಅಕ್ಷಯ್ ಪುತ್ತೂರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.