ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ಎರಡು ದಿನ ಹಾಲು ಸಂಗ್ರಹಣೆಯೂ ಸ್ಥಗಿತ

ಜಿಲ್ಲಾಡಳಿತ ಘೋಷಣೆಯಿಂದ ಸೃಷ್ಟಿಯಾದ ಗೊಂದಲ: ಮಾರಾಟವಾಗದ ಹಾಲು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 12:14 IST
Last Updated 28 ಮಾರ್ಚ್ 2020, 12:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಶುಕ್ರವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ ನಿರ್ಧಾರದಿಂದ ಜಿಲ್ಲೆಯಾದ್ಯಂತ ಹಾಲು ಮಾರಾಟ ಹಾಗೂ ಪೂರೈಕೆ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಿದೆ.

ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಶನಿವಾರ (ಇದೇ 28) ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣ ಬಂದ್ ಮಾಡಲು ಹಾಗೂ ಯಾವುದೇ ಅಂಗಡಿ, ಮುಂಗಟ್ಟು ತೆರೆಯದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಡೀಲರ್‌ಗಳು ಹಾಲು ಮಾರಾಟಕ್ಕೆ ಸಾಧ್ಯವಾಗದೇ, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ.

ಇದೇ 22 ರಿಂದ ಅವಿಭಜಿತ ಜಿಲ್ಲೆಯಲ್ಲಿ ಲಾಕ್‌ಡೌನ್‌ ಇರುವುದರಿಂದ ಹಾಲಿನ ಮಾರಾಟದಲ್ಲಿ ನಿತ್ಯ 1 ಲಕ್ಷ ಲೀಟರ್‌ ಕಡಿಮೆಯಾಗಿದೆ. ಹಾಲನ್ನು ಪರಿವರ್ತನಾ ಘಟಕಗಳಿಗೆ ಕಳುಹಿಸಿದ್ದು, ಅಲ್ಲಿಯೂ ಸಾಮರ್ಥ್ಯ ಮೀರಿ ಹಾಲಿನ ದಾಸ್ತಾನು ಇರುವುದರಿಂದ ತಕ್ಷಣ ಪರಿವರ್ತನೆ ಮಾಡಲು ಸಾಧ್ಯವಾಗಿಲ್ಲ. ಒಕ್ಕೂಟವು ಸಂಘಗಳಿಂದ ಹಾಲನ್ನು ಸಂಗ್ರಹಿಸಿ, ದಾಸ್ತಾನು ಇಡಲು ಸಾಧ್ಯವಾಗುತ್ತಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.

ADVERTISEMENT

ಸದ್ಯದ ಪರಿಸ್ಥಿತಿಯನ್ನು ನಿಯಂತ್ರಿಸಲು ಅನಿವಾರ್ಯವಾಗಿ ಭಾನುವಾರ (ಇದೇ 29) ಮತ್ತು ಸೋಮವಾರ(ಇದೇ 30) ರಂದು ಬೆಳಿಗ್ಗೆ ಹಾಗೂ ಸಂಜೆ ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ನಿತ್ಯದಂತೆ ಮುಂದುವರಿಯಲಿದೆ. ಇದೇ 31 ರಿಂದ ಗುಣಮಟ್ಟದ ಹಾಲು ಸಂಗ್ರಹಣೆ ಮತ್ತೆ ಆರಂಭಗೊಳ್ಳಲಿದೆ. ಈ ಬಗ್ಗೆ ಹೈನುಗಾರರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಹಾಲು ಮಾರಾಟಕ್ಕೆ ನಿರ್ಬಂಧವಿಲ್ಲ

ಪರಿಸ್ಥಿತಿ ಬಿಗಡಾಯಿಸಿದ್ದರಿಂದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ. ಹೆಗಡೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಇದರಿಂದಾಗಿ ಸ್ಪಷ್ಟ ಸೂಚನೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಿಸಲು ಸಂಪೂರ್ಣ ಬಂದ್ ಮಾಡುವ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಈ ಸಂದರ್ಭದಲ್ಲಿ ಹಾಲು, ಅಡುಗೆ ಅನಿಲ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆ ಆಗುವುದಿಲ್ಲ. ಅಲ್ಲದೇ ಹಾಲು ಮಾರಾಟಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.