ADVERTISEMENT

ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕಾರ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 2:34 IST
Last Updated 24 ಡಿಸೆಂಬರ್ 2024, 2:34 IST
ಅರಣ್ಯ ಸಚಿವ ಈಶ್ವರ ಖಂಡ್ರೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು
ಅರಣ್ಯ ಸಚಿವ ಈಶ್ವರ ಖಂಡ್ರೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು   

ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರ್ಕಾರ ನಿವಾರಣೆ ಮಾಡಿದ್ದು, ವರದಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಪಶ್ಚಿಮ ಘಟ್ಟ ಸಂರಕ್ಷಣೆಗೂ ಜನ ಆದ್ಯತೆ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶತಮಾನಗಳಿಂದ ಜನ ಇಲ್ಲಿ ವಾಸಿಸುತ್ತಿದ್ದು, ಅರಣ್ಯದಂಚಿನ ಜನರೇ ಅರಣ್ಯ ರಕ್ಷಿಸುತ್ತಿದ್ದಾರೆ. ಅರಣ್ಯ ರಕ್ಷಣೆಗೆ ಈಗಾಗಲೇ ನಮ್ಮಲ್ಲಿ ಯೋಜನೆಗಳಿವೆ. ಜನರ, ಜನಪ್ರತಿನಿಧಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಕೇಂದ್ರಕ್ಕೆ ತಿಳಿಸಿದ್ದೇವೆ ಎಂದರು.

ಜಂಟಿ ಸರ್ವೆಗೆ ಸಂಬಂಧಿಸಿ ಕಂದಾಯ, ಅರಣ್ಯ ಸಚಿವರು, ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಜಂಟಿ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಜಂಟಿ ಸರ್ವೆಗೆ ಸಮಿತಿ ರಚಿಸಲಾಗಿದೆ. ಅದರಂತೆ ಮುಂದಿನ ಆರು ತಿಂಗಳಲ್ಲಿ ಸರ್ವೆ ನಡೆಸಿ ವಾಸ್ತವದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಈ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಯಲಿದೆ ಎಂದರು.

ADVERTISEMENT

ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು ಗ್ರಾಮದ ಕಡಮಕಲ್ಲು– ಕೊಡಗಿನ ಗಾಳಿಬೀಡು ಸಂಪರ್ಕ ರಸ್ತೆ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಿ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಕುಮಾರಪರ್ವತ ಚಾರಣಿಗರಿಗೆ ಸವಲತ್ತು ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕಾಡಾನೆ ದಾಳಿ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಹಸಿರೀಕರಣ, ಅರಣ್ಯ ಉಳಿಸಲು ಹೆಚ್ಚಿನ ಯೋಜನೆ ರೂಪಿಸಿದ್ದಾರೆ. 2023ರಿಂದ 2025ರ ಮಧ್ಯೆ ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗುವ ವಿಶ್ವಾಸ ಇದೆ ಎಂದರು.

ಸಂಸದ ಸಾಗರ್ ಖಂಡ್ರೆ, ಡಿಸಿಎಫ್ ಅಂತೋಣಿ ಮರಿಯಪ್ಪ, ಎಸಿಎಫ್ ಪ್ರವೀಣ್ ಕುಮಾರ್, ವಿಮಲ್ ಬಾಬು, ಮಂಜುನಾಥ್, ಸಂಧ್ಯಾ, ದೇವಳದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.