ಮಂಗಳೂರು: ಸಿದ್ದರಾಮಯ್ಯ ಯಾವಾಗಲೆಲ್ಲ ಅಧಿಕಾರಕ್ಕೆ ಬರುತ್ತಾರೋ ಆಗೆಲ್ಲ ಜಾತಿಗಳ ಮಧ್ಯೆ ಧರ್ಮಗಳ ಮಧ್ಯೆ ಒಡೆಯುವ ಕೆಲಸವನ್ನು ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಗುರುವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ, ಜಾತಿ ಗಣತಿಯನ್ನು ಪ್ರಸ್ತಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈ ಕಮಾಂಡ್ ದೆಹಲಿಗೆ ಕರೆಸಿಕೊಂಡಿರುವುದೇ ಜನರ ಮನಸ್ಸಿನಿಂದ ಕಾಲ್ತುಳಿತ ಘಟನೆಯನ್ನು ಮರೆಸಿ, ಹೊಸ ವಿಚಾರ ತರಬೇಕು ಎಂದು ತಿಳಿಸಲು ಎಂದರು.
ಕಾಂತರಾಜ್ ಆಯೋಗ ಮತ್ತು ಜಯಪ್ರಕಾಶ್ ಹೆಗ್ಡೆ ಆಯೋಗದ ನೇತೃತ್ವದಲ್ಲಿ ನಡೆದ ಜಾತಿ ಜನಗಣತಿಗೆ 10 ವರ್ಷಗಳಲ್ಲಿ ಎಷ್ಟು ಖರ್ಚು ಮಾಡಿದ್ರಿ? ಆ ಜಾತಿ ಗಣತಿ ವರದಿಯನ್ನು ಎಲ್ಲರ ವಿರೋಧದ ಮಧ್ಯೆ ಮಂಡನೆ ಮಾಡಿದ್ದೀರಲ್ಲ, ಯಾವ ಅಶಾಂತಿ ಸೃಷ್ಟಿಸಲು ಮಾಡಿದ್ರಿ ಆ ಕೆಲಸ ಮಾಡಿದ್ರಿ? ಈಗ ಯಾಕೆ ಅದನ್ನು ಬೇಡ ಹೇಳುತ್ತಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ ಅವರು, ಇದರ ಹಿಂದೆ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶ ಇಲ್ಲ. ಜಾತಿ -ಜಾತಿಯ ನಡುವೆ ಒಡಕು ಸೃಷ್ಟಿಸಿ ಅದನ್ನು ಇನ್ನಷ್ಟು ಸೂಕ್ಷ್ಮಮಾಡಿ ಉಪ ಜಾತಿಗಳ ನಡುವೆ ಹೊಡೆದಾಟ ಮಾಡಿಸುವ ವ್ಯವಸ್ಥಿತ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
2004 ರಿಂದ 2014ರ ವರೆಗೆ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ದೊರೆತಿದ್ದು ₹1.44 ಲಕ್ಷ ಕೋಟಿ ಅನುದಾನ ಆಗಿದ್ದರೆ, 2014 ರಿಂದ 2024ರ ವರೆಗೆ ₹5.42 ಲಕ್ಷ ಕೋಟಿ ಅನುದಾನ ದೊರೆತಿದೆ. 275 ಹೆಚ್ಚುವರಿ ಅನುದಾನ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರು, ಅವರಿಗೆ ಲೆಕ್ಕ ಬಂದರೆ ಈ ಲೆಕ್ಕದ ಬಗ್ಗೆ ಹೇಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.