ADVERTISEMENT

ಕೃಷ್ಣ ವೇಷಧಾರಿ ಮಗುವಿನ ಫೊಟೊ ಬಳಕೆ ಪ್ರಕರಣ ರಾಜಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 6:43 IST
Last Updated 19 ಸೆಪ್ಟೆಂಬರ್ 2024, 6:43 IST

ಮೂಡುಬಿದಿರೆ: ಮಗುವಿನ ಚಿಕಿತ್ಸೆಗೆ ಸಾಮಾಜಿಕ ಜಾಲತಾಣಗಳಲ್ಲಿ ದಾನಿಗಳಿಂದ ನೆರವು ಕೇಳುವ ಸಲುವಾಗಿ ಬಹುಮಾನ ವಿಜೇತ ಶ್ರೀಕೃಷ್ಣ ವೇಷಧಾರಿ ಬಾಲಕಿಯ ಫೊಟೊವನ್ನು ಬಳಕೆ ಮಾಡಿದ್ದರಿಂದ ಉಂಟಾದ ವಿವಾದ ರಾಜಿಯಲ್ಲಿ ಇತ್ಯರ್ಥಗೊಂಡಿದೆ.

ಕುಂದಾಪುರದಲ್ಲಿ ಅಪಘಾತಕ್ಕೀಡಾದ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಸಾರ್ವಜನಿಕರಿಂದ ನೆರವು ಕೋರಿ ತೋಡಾರಿನ ನವಚೇತನ ಸೇವಾ ಬಳಗವು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿತ್ತು.  ಈ ಮಾಹಿತಿಯಲ್ಲಿ ಶ್ರೀಕೃಷ್ಣ ವೇಷಧಾರಿಯಾಗಿ ಜಿಲ್ಲೆಯ ಹಲವು ಕಡೆ ಬಹುಮಾನ ಗೆದ್ದು ಪ್ರಸಿದ್ಧಿಯಾದ ಮೂಡುಬಿದಿರೆಯ ಬಾಲಕಿಯೊಬ್ಬಳ ಫೊಟೊವನ್ನು ಬಳಸಿಕೊಳ್ಳಲಾಗಿತ್ತು.

‘ತಮ್ಮ ಮನವಿ ಸಾರ್ವಜನಿಕ ವಲಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿ ಮತ್ತು ಇದರಿಂದ ಹೆಚ್ಚು ಆರ್ಥಿಕ ನೆರವು ಮಗುವಿಗೆ ಸಿಗಲಿ’ ಎಂಬ ಸದುದ್ದೇಶದಿಂದ ಕೃಷ್ಣ ವೇಷಧಾರಿ ಬಾಲಕಿಯ ಫೊಟೊ ಬಳಸಿದ್ದೆವು ಎಂದು ಅವರು ಹೇಳಿಕೊಂಡಿದ್ದರು. ಆದರೆ, ಆ  ಮಗುವಿನ ಪೋಷಕರ ಅನುಮತಿ ಪಡೆಯದೆ ಫೊಟೊ ಬಳಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ನವಚೇತನ ಸೇವಾ ಬಳಗದ ಸುಖೇಶ್ ಮತ್ತು ಪ್ರಮುಖರು ಮತ್ತು ಶ್ರೀಕೃಷ್ಣ ವೇಷಧಾರಿ ಮಗುವಿನ ತಂದೆ ಒಂಟಿಕಟ್ಟೆಯ ವಿಠಲ ಅವರನ್ನು ಠಾಣೆಗೆ ಕರೆಸಿ ಪೊಲೀಸರು ಮಾತುಕತೆ ನಡೆಸಿದ್ದಾರೆ. ತಪ್ಪು ತಿಳುವಳಿಕೆಯಿಂದ ಘಟನೆ ನಡೆದಿರುವುದನ್ನು ನವಚೇತನ ಸೇವಾ ಬಳಗ ಒಪ್ಪಿಕೊಂಡಿದ್ದು, ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ. ಈ ಬಗ್ಗೆ ಎರಡೂ ಕಡೆಯವರು ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.