ADVERTISEMENT

ಮಂಗಳೂರು: ‘ಸ್ಮಾರ್ಟ್‌ ಸಿಟಿ’ಗೆ ಸುಡುಬೆಂಕಿಯಾದ ‘ಮಿಶ್ರ ಕಸ’

ಮೇಲ್ವಿಚಾರಣೆಯ ಕೊರತೆಯಿಂದ ಹೆಚ್ಚುತ್ತಿರುವ ಬ್ಲ್ಯಾಕ್‌ ಸ್ಪಾಟ್‌ಗಳು, ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ

ಸಂಧ್ಯಾ ಹೆಗಡೆ
Published 10 ಫೆಬ್ರುವರಿ 2025, 7:12 IST
Last Updated 10 ಫೆಬ್ರುವರಿ 2025, 7:12 IST
ಅಂಬಾಮಹೇಶ್ವರಿ ಸೇವಾ ಟ್ರಸ್ಟ್‌ ನಡೆಸಿದ ಜಾಗೃತಿ ಕಾರ್ಯದಿಂದ ಕಸ ಪ್ರತ್ಯೇಕಿಸಿ ನೀಡುವ ನಿವಾಸಿಗಳು
ಅಂಬಾಮಹೇಶ್ವರಿ ಸೇವಾ ಟ್ರಸ್ಟ್‌ ನಡೆಸಿದ ಜಾಗೃತಿ ಕಾರ್ಯದಿಂದ ಕಸ ಪ್ರತ್ಯೇಕಿಸಿ ನೀಡುವ ನಿವಾಸಿಗಳು   

ಮಂಗಳೂರು: ದಾರಿ ಬದಿಯಲ್ಲಿ ಇಣುಕುವ ಕಸದ ಮೂಟೆಗಳ ರಾಶಿ, ಪ್ಲಾಸ್ಟಿಕ್ ಕವರ್‌ಗಳನ್ನು ಕಚ್ಚಿ ಹರಿದು ಚೆಲ್ಲಾಪಿಲ್ಲಿ ಮಾಡುವ ಬೀದಿ ನಾಯಿಗಳು, ರಸ್ತೆ ಪಕ್ಕದ ಮೂಲೆಯಲ್ಲಿ ದುರ್ನಾತ ಬೀರುವ ಮೂಲಕವೇ ದಾರಿಹೋಕರ ಲಕ್ಷ್ಯ ಸೆಳೆಯುವ ಹಸಿ ಕಸದ ಬ್ಯಾಗ್‌ಗಳು, ಕಾಂಕ್ರೀಟ್ ತ್ಯಾಜ್ಯ... ನಗರದ ಯಾವ ರಸ್ತೆಯಲ್ಲಿ ಹೋದರೂ ಇಂತಹ ದೃಶ್ಯಗಳು ಕಣ್ಣಿಗೆ ಬೀಳದೆ ಇರಲಾರವು.

‘ಸ್ಮಾರ್ಟ್’ ಆಗುತ್ತಿರುವ ಮಂಗಳೂರಿನ ಸೌಂದರ್ಯವು, ಹೆಚ್ಚುತ್ತಿರುವ ಬ್ಲ್ಯಾಕ್ ಸ್ಪಾಟ್‌ಗಳಿಂದಾಗಿ ಸೊರಗುತ್ತಿದೆ. ಮಹಾನಗರ ಪಾಲಿಕೆಯ ನಿರಂತರ ನಿಗಾ, ಮೇಲ್ವಿಚಾರಣೆಯ ಕೊರತೆ ಒಂದೆಡೆಯಾದರೆ, ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಬೀದಿಗೆ ತಂದು ಸುರಿಯುವ ಜನರ ಸಂವೇದನಾರಹಿತ ಮನೋಭಾವ ಸಮಸ್ಯೆ ಬಿಗಡಾಯಿಸಲು ಕಾರಣ ಎಂಬುದು ಪ್ರಜ್ಞಾವಂತ ನಾಗರಿಕರ ಆರೋಪ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ 280ರಿಂದ 290 ಟನ್ ಕಸ ಉತ್ಪತ್ತಿಯಾಗುತ್ತದೆ. ಅದರಲ್ಲಿ ಸುಮಾರು 110 ಟನ್ ಹಸಿ ಕಸ ಇದ್ದರೆ, 90 ಟನ್‌ನಷ್ಟು ಮಿಶ್ರ ಕಸ (ಮಿಕ್ಸ್‌ ವೇಸ್ಟ್‌) ಇರುತ್ತದೆ. ಹೋಟೆಲ್‌ಗಳಿಂದ ತರುವ ಪಾರ್ಸಲ್, ಆನ್‌ಲೈನ್ ಆರ್ಡರ್‌ನಲ್ಲಿ ಬರುವ ತಿನಿಸುಗಳ ಕವರ್‌ಗಳು, ಮಾಂಸಾಹಾರದ ತ್ಯಾಜ್ಯವನ್ನು ಕಟ್ಟಿ ಎಸೆಯುವ ಪ್ಲಾಸ್ಟಿಕ್ ಕವರ್‌ಗಳು, ದ್ರವ ಪದಾರ್ಥ ಸೇರಿಕೊಂಡಿರುವ ಏಕ ಬಳಕೆಯ ಪ್ಲಾಸ್ಟಿಕ್ ಈ ಗುಂಪಿಗೆ ಸೇರುತ್ತವೆ. ವಾರದ ಕೊನೆ, ಹಬ್ಬಗಳ ಸಂದರ್ಭಗಳಲ್ಲಿ ಈ ರೀತಿ ಉತ್ಪತ್ತಿಯಾಗುವ ಕಸದ ಪ್ರಮಾಣ ಇನ್ನೂ 5–10 ಟನ್ ಹೆಚ್ಚಾಗುತ್ತದೆ. ಇವುಗಳ ವಿಲೇವಾರಿ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿದೆ. 

ADVERTISEMENT

ರಾಮ್ಕಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಸೈನಿಕ ಹುಳ ತಂತ್ರಜ್ಞಾನದ ಮೂಲಕ ಸಂಸ್ಕರಿಸಿ, ಗೊಬ್ಬರ ಹಾಗೂ ಫಿಷ್ ಫೀಡ್ ತಯಾರಿಸುತ್ತದೆ. ಪಾಲಿಕೆ ಶುಲ್ಕರಹಿತವಾಗಿ ನೀಡಿರುವ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಈ ಸಂಸ್ಥೆಯ ಕಸ ಸಂಸ್ಕರಣೆ ಘಟಕ ಇದೆ. ಆದರೆ, ಮಿಶ್ರ ಕಸದ ವೈಜ್ಞಾನಿಕ ವಿಲೇವಾರಿಗೆ ಪಾಲಿಕೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲವಾಗಿದ್ದು, ಇದು ತ್ಯಾಜ್ಯ ವಿಲೇವಾರಿ ಘಟಕದ ಹೊರೆಯನ್ನು ಹೆಚ್ಚಿಸುಸುತ್ತಿದೆ.

‘ನಮ್ಮ ಭಾಗದಲ್ಲಿ ಅನೇಕರು ಹಸಿ ಹಾಗೂ ಒಣ ಕಸವನ್ನು ಒಟ್ಟಿಗೆ ಒಂದೇ ಕವರ್‌ನಲ್ಲಿ ಹಾಕಿ ಪ್ರತಿದಿನ ಬರುವ ಕಸದ ವಾಹನಕ್ಕೆ ಕೊಡುತ್ತಾರೆ. ಕಸ ಒಯ್ಯಲು ಸಮಸ್ಯೆ ಇಲ್ಲ. ಆದರೆ, ಪ್ರತ್ಯೇಕಿಸುವ ಅರಿವು ಜನರಲ್ಲಿ ಬೆಳೆದಿಲ್ಲ’ ಎನ್ನುತ್ತಾರೆ ವೃತ್ತಿಯಲ್ಲಿ ಚಾಲಕರಾಗಿರುವ ಜಾರ್ಜ್.

ನಗರದ ಹೃದಯ ಭಾಗದಲ್ಲಿ ಕಸ ಸಂಗ್ರಹಣೆಗೆ ಸಮಸ್ಯೆ ಇಲ್ಲ. ಆದರೆ, ಒಳ ಪ್ರದೇಶಗಳು, ಹೊರವಲಯದಲ್ಲಿ ಅಷ್ಟು ಸಮರ್ಪಕವಾಗಿಲ್ಲ. ಒಣ ಕಸ ಸಂಗ್ರಹಿಸಿಟ್ಟುಕೊಳ್ಳುವುದೇ ದೊಡ್ಡ ತಲೆಬಿಸಿ. ಮನೆ ಒಳಗೆ ಇಡಲು ಜಾಗ ಸಾಲದು, ಹೊರಗೆ ಸಂಗ್ರಹಿಸಿಟ್ಟರೆ ಹೆಗ್ಗಣಗಳ ಕಾಟ. ವಾರಕ್ಕೆ ಎರಡು ದಿನ ಒಣ ಕಸ ಸಂಗ್ರಹಿಸಿದರೆ ಒಳ್ಳೆಯದು ಎನ್ನುತ್ತಾರೆ ಬೊಂದೇಲ್ ವಾರ್ಡ್‌ನ ಜಾನಕಿ.

ಮಹಾನಗರ ಪಾಲಿಕೆ ಕಸ ಸಂಗ್ರಹಕ್ಕೆ ಖರೀದಿಸಿದ್ದ ಎಲೆಕ್ಟ್ರಿಕ್‌ ವಾಹನಗಳು ದೂಳು ಹಿಡಿದು ನಿಂತಿವೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಅವರು ವಿಡಿಯೊ ಚಿತ್ರೀಕರಿಸಿ ಹಾಕಿದ್ದ ಪೋಸ್ಟ್ ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು.

ಈ ಬಗ್ಗೆ ಮಾತನಾಡಿದ ಅವರು, ‘ಸಣ್ಣ ಓಣಿ ಇರುವ ಒಳ ಪ್ರದೇಶಗಳಿಗೆ ತೆರಳಲು ಅನುಕೂಲವಾಗುವಂತೆ ಪಾಲಿಕೆ ಖರೀದಿಸಿದ್ದ ಎಲೆಕ್ಟ್ರಿಕ್ ಕಸ ಸಂಗ್ರಹ ವಾಹನಗಳು ಬಳಕೆಯಾಗುತ್ತಿಲ್ಲ. ನಗರದಲ್ಲಿ ಬ್ಲ್ಯಾಕ್ ಸ್ಪಾಟ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಪಾಲಿಕೆಯವರು ಸಿಸಿಟಿವಿ ಕ್ಯಾಮೆರಾ ಹಾಕಿ, ಬ್ಯಾನರ್ ಕಟ್ಟಿದ್ದಾರೆ. ಆದರೆ, ಅದರ ಬಗ್ಗೆ ನಿಗಾವಹಿಸದಿದ್ದರೆ ಸಿಸಿಟಿವಿ ಕ್ಯಾಮೆರಾ ಹಾಕಿ ಏನು ಪ್ರಯೋಜನ? ಕ್ಯಾಮೆರಾ ಮೂಲಕ ಕಸ ಹಾಕುವವರನ್ನು ಪತ್ತೆ ಹಚ್ಚಿ, ಕ್ರಮ ಕೈಗೊಂಡರೆ ಮಾತ್ರ ಹಾದಿ–ಬೀದಿಯಲ್ಲಿ ಕಸ ಇಟ್ಟು ಹೋಗುವುದಕ್ಕೆ ಕಡಿವಾಣ ಹಾಕಬಹುದು’ ಎಂದು ಸಲಹೆ ನೀಡಿದರು.

ನಗರದ ಹೊರವಲಯದ ಗ್ರಾಮ ಪಂಚಾಯಿತಿಗಳು ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರಾತ್ರಿ ವೇಳೆ ಕಸ ತಂದು ಸುರಿಯುತ್ತವೆ. ಪಾಲಿಕೆಯಿಂದ ಇದನ್ನು ತಡೆ‌ಗಟ್ಟಲು ಕ್ರಮವಾಗಬೇಕು ಎಂದು ಪರಿಸರ ಕಾರ್ಯಕರ್ತರೊಬ್ಬರು ಹೇಳಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಮನೆಗಳಿಂದ ಹಸಿ ಕಸ ಹಾಗೂ ಪ್ರತಿ ಶುಕ್ರವಾರ ಒಣ ಕಸ ಸಂಗ್ರಹಿಸಲಾಗುತ್ತದೆ. ಮಿಶ್ರ ಕಸದ ವಿಲೇವಾರಿಗೆ ಯೋಜನೆ ರೂಪಿಸಲಾಗುತ್ತಿದೆ. ಸಾರ್ವಜನಿಕರು ಸ್ವಚ್ಛತೆಯ ಪ್ರಜ್ಞೆ ಬೆಳೆಸಿಕೊಂಡು ಪಾಲಿಕೆ ಜೊತೆ ಕೈ ಜೋಡಿಸಿದಾಗ ಮಾತ್ರ ಸ್ವಚ್ಛ ನಗರದ ಕನಸು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಜನರು ಕಡ್ಡಾಯವಾಗಿ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಿಸಿ ಕೊಡಬೇಕು’ ಎನ್ನುತ್ತಾರೆ ಪಾಲಿಕೆಯ ಪರಿಸರ ಎಂಜಿನಿಯರ್ ದಯಾನಂದ ಪೂಜಾರಿ.

‘ಕೇಟರಿಂಗ್ ಉದ್ಯಮದವರು ಏಕಬಳಕೆಯ ಪ್ಲಾಸ್ಟಿಕ್‌ ಬಿಟ್ಟು ಮರು ಬಳಕೆಯ ಸಾಮಗ್ರಿ ಬಳಕೆ ಮಾಡಿದರೆ ಪ್ರತಿದಿನ ಸರಾಸರಿ 5 ಟನ್ ಕಸ ಉತ್ಪತ್ತಿಯಾಗುವುದನ್ನು ತಗ್ಗಿಸಬಹುದು. ನಗರದಲ್ಲಿ 20ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಹಸಿ ಕಸ ನಿರ್ವಹಣೆಯನ್ನು ಮಾಡಿಕೊಳ್ಳುತ್ತಿವೆ. ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಿಸುವ ನಿಟ್ಟಿನಲ್ಲಿ ನಿರಂತರ ನಿಗಾವಹಿಸಿ, ವಾರದಲ್ಲಿ ಎರಡು ದಿನ ಅಂಗಡಿಗಳ ಮೇಲೆ ದಾಳಿ ನಡೆಸಲು ಯೋಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಪಾಲಿಕೆಯಲ್ಲಿ ಪ್ರಸ್ತುತ 766ರಷ್ಟು ಪೌರ ಕಾರ್ಮಿಕರು ಇದ್ದಾರೆ. 60 ವಾರ್ಡ್‌ಗಳು ಇರುವ ನಗರಕ್ಕೆ ಇನ್ನೂ 200ರಷ್ಟು ಪೌರ ಕಾರ್ಮಿಕರ ಅಗತ್ಯವಿದೆ. ಐದಾರು ವಾರ್ಡ್‌ಗಳು ಸೇರಿ ಒಬ್ಬರು ಆರೋಗ್ಯ ನಿರೀಕ್ಷಕರು ಇದ್ದು, ಮೇಲ್ವಿಚಾರಣೆ ನಡೆಸುವುದು ಅವರಿಗೂ ಕಷ್ಟವಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೌರಕಾರ್ಮಿಕರು ಕಸವನ್ನು ಲಾರಿಗೆ ತುಂಬುತ್ತಿರುವುದು : ಪ್ರಜಾವಾಣಿ ಚಿತ್ರ
ಒಟ್ಟು ವಾಹನಗಳು;156 ಮನೆ ಮನೆ ಕಸ ಸಂಗ್ರಹಿಸುವ ವಾಹನ;107 ಟಿಪ್ಪರ್;30 ಕಾಂಪ್ಯಾಕ್ಟರ್;19, ಪ್ರತಿದಿನ ಸಂಗ್ರವಾಗುವ ಕಸ; 280–290 ಟನ್ ಹಸಿ ಕಸ;110 ಟನ್ ಮಿಶ್ರ ಕಸ;90 ಟನ್ ಒಣ ಕಸ;60 ಟನ್ ಎಳನೀರು ಚಿಪ್ಪು;20 ಟನ್ ಪ್ರತಿ ಶುಕ್ರವಾರ ಸಂಗ್ರಹವಾಗುವ ಒಣ ಕಸ;180 ಟನ್
‘ಸ್ಯಾನಿಟರಿ ಕಸ: ವೈಜ್ಞಾನಿಕ ವಿಲೇವಾರಿ’
ಜನರು ಪ್ರಸ್ತುತ ಒಣ ಕಸದೊಂದಿಗೆ ಸ್ಯಾನಿಟರಿ ವೇಸ್ಟ್‌ ಅನ್ನು ಸೇರಿಸಿ ಕೊಡುತ್ತಿದ್ದಾರೆ. ಸ್ಯಾನಿಟರಿ ಕಸದ ವೈಜ್ಞಾನಿಕ ವಿಲೇವಾರಿಗೆ ಯೋಚಿಸಲಾಗಿದೆ. ಈ ಸಂಬಂಧ ಎಂಟೊ ಪ್ರೊಟೀನ್ ಕಂಪನಿ ಆಸಕ್ತಿ ತೋರಿದ್ದು ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಲ್ಲಿಸಲು ತಿಳಿಸಲಾಗಿದೆ. ವರದಿ ಆಧರಿಸಿ ಈ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು. ಸ್ಯಾನಿಟರಿ ವೇಸ್ಟ್‌ ಅನ್ನು ಪ್ರತ್ಯೇಕಿಸಿ ನೀಡುವಂತೆ ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಮುಖ್ಯಸ್ಥರನ್ನು ಭೇಟಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.
ಕಸ ಸಂಗ್ರಹ: ಮಾದರಿ ಕಾರ್ಯ
- ‘ನಮ್ಮ ಊರು- ನಮ್ಮ ಹೆಮ್ಮೆ’ ಘೋಷವಾಕ್ಯದ ಅಡಿಯಲ್ಲಿ ಜಪ್ಪುವಿನ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಮೂರು ವಾರ್ಡ್‌ಗಳಲ್ಲಿ ಮಾದರಿ ಕಾರ್ಯ ನಡೆಸುತ್ತಿದೆ.  ಮಂಗಳಾದೇವಿ ಬೋಳಾರ ಹೊಯ್ಗೆಬಜಾರ್ ಈ ಮೂರು ವಾರ್ಡ್‌ಗಳಲ್ಲಿ 2022ರಿಂದ ಸ್ವಚ್ಛತೆ ಜಾಗೃತಿ ಅಭಿಯಾನ ನಡೆಸುತ್ತಿರುವ ಟ್ರಸ್ಟ್‌ ಇದಕ್ಕಾಗಿ ಸಿಬ್ಬಂದಿ ನೇಮಿಸಿಕೊಂಡು ನಿರಂತರ ನಿಗಾ ವಹಿಸುತ್ತಿದೆ. ‘ಹಸಿ ಕಸ– ಒಣ ಕಸ ಪ್ರತ್ಯೇಕಿಸಿ ಕೊಡುವುದು ದಾರಿ ಬದಿಯಲ್ಲಿ ಕಸ ಇಡದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸುಮಾರು 5800ರಷ್ಟು ಮನೆಗಳನ್ನು ಸಂಪರ್ಕಿಸಿ ಅರಿವು ಮೂಡಿಸಲಾಗಿದೆ. ನೇಮಕ ಮಾಡಿಕೊಂಡಿರುವ ಸಿಬ್ಬಂದಿಗೆ ಟ್ರಸ್ಟ್ ಮೂಲಕವೇ ಗೌರವಧನ ಪಾವತಿಸಲಾಗುತ್ತದೆ. ನಮ್ಮ ಸಿಬ್ಬಂದಿ ಪ್ರತಿನಿತ್ಯ ಮನೆಗಳಿಗೆ ಭೇಟಿ ನೀಡಿ ಜನರಿಗೆ ತಿಳಿ ಹೇಳುತ್ತಾರೆ’ ಎನ್ನುತ್ತಾರೆ ಟ್ರಸ್ಟ್ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್. ‘ಈ ಮೊದಲು ಸುಮಾರು 500 ಮನೆಗಳಿಂದ ಮಿಶ್ರ ಕಸ ಬರುತ್ತದೆ ಎಂಬ ದೂರು ಇತ್ತು. ನಮ್ಮ ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಿದ ಮೇಲೆ ಅಲ್ಲಿನ ನಿವಾಸಿಗಳು ಕಸವನ್ನು ಪ್ರತ್ಯೇಕಿಸಿ ವಾಹನಕ್ಕೆ ತಂದು ಕೊಡಲು ಪ್ರಾರಂಭಿಸಿದ್ದಾರೆ. ನಿರಂತರ ನಿಗಾ ವಹಿಸಿದರೆ ಇವೆಲ್ಲ ಕಷ್ಟದ ಸಂಗತಿಗಳಲ್ಲ. ಪ್ರಸ್ತುತ ಶೇ 90ರಷ್ಟು ಮನೆಗಳವರು ಕಸವನ್ನು ಪ್ರತ್ಯೇಕಿಸಿ ಕೊಡುತ್ತಾರೆ. ಮಹಾನಗರ ಪಾಲಿಕೆ ನಮ್ಮೊಂದಿಗೆ ಕೈ ಜೋಡಿಸಿದರೆ ಶೇ 100ರ ಸಾಧನೆ ಸಾಧ್ಯವಾಗಿಸಬಹುದು. ಪಾಲಿಕೆಯಿಂದ ನಾವು ಇನ್ನಷ್ಟು ಸಹಕಾರ ನಿರೀಕ್ಷಿಸಿದ್ದೇವೆ’ ಎಂದು ಅವರು ತಿಳಿಸಿದರು. ತಿಂಗಳಲ್ಲಿ ಒಂದು ದಿನ ಗುಜ್ಜರ ಕೆರೆ ಸುತ್ತಲಿನ ಪ್ರದೇಶದಲ್ಲಿ ಶ್ರಮದಾನ ನಡೆಸಿ ಸ್ವಚ್ಛ ಮಾಡುವುದು ಕೂಡ ಟ್ರಸ್ಟ್‌ನ ಚಟುವಟಿಕೆಯ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.