ADVERTISEMENT

ನಾಯಿಗೆ ಬೊಗಳುವುದೇ ಕೆಲಸ: ಛಲವಾದಿ ಹೇಳಿಕೆಗೆ ಅಶೋಕ್ ರೈ ತಿರುಗೇಟು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 3:01 IST
Last Updated 16 ಫೆಬ್ರುವರಿ 2026, 3:01 IST
ಅಶೋಕ್ ರೈ
ಅಶೋಕ್ ರೈ   

ಪುತ್ತೂರು (ದಕ್ಷಿಣ ಕನ್ನಡ): ‘ನಾಯಿ ಕಳ್ಳ ಬಂದರೂ ಬೊಗಳುತ್ತದೆ, ಒಳ್ಳೆಯವರು ಬಂದರೂ ಬೊಗಳುತ್ತದೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದು ನಾಯಿಗೆ ಗೊತ್ತಾಗುವುದಿಲ್ಲ. ಛಲವಾದಿಯೂ ಅದೇ ನಾಯಿ ರೀತಿ. ಅದಕ್ಕೆ ಏನೂ ಗೊತ್ತಾಗಿಲ್ಲ, ಬೊಗಳಿದೆ. ಅದಕ್ಕೆ ನಾವೇನೂ ತಲೆಬಿಸಿ ಮಾಡಿಕೊಳ್ಳುವುದಿಲ್ಲ, ಪ್ರಾಣಿಯಲ್ವಾ’ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಶನಿವಾರ ಉಪ್ಪಿನಂಗಡಿಯಲ್ಲಿ ನೀಡಿದ್ದ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಹಮ್ಮಿಕೊಂಡಿದ್ದ ಪಾದಾಯಾತ್ರೆಯಲ್ಲಿ ಶನಿವಾರ ಭಾಗವಹಿಸಿದ್ದ ಛಲವಾದಿ ನಾರಾಯಣ ಸ್ವಾಮಿ ಅವರು, ‘ಅನುದಾನದ ವಿಚಾರದಲ್ಲಿ ಕಾಂಗ್ರೆಸಿಗರು ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ. ಬಾಯಿ ಬಿಟ್ಟರೆ ಸುಳ್ಳನ್ನೇ ಹೇಳುವ ಶಾಸಕ ಅಶೋಕ್‌ ಕುಮಾರ್ ರೈ ಅವರಿಗೆ ತಾಕತ್ತು ಇದ್ದರೆ ನಮ್ಮ ವೇದಿಕೆಗೆ ಬಂದು ಯಾವ ಅನುದಾನ ಬಂದಿದೆ ಎಂಬುದನ್ನು ತಿಳಿಸಲಿ. ಅವರು ಹೇಳಿದ ಒಂದೊಂದು ಸುಳ್ಳಿನ ಬಗ್ಗೆ ಅವರ ಬಟ್ಟೆ ಬಿಚ್ಚುತ್ತೇನೆ’ ಎಂದಿದ್ದರು.

ADVERTISEMENT

‘ಅವನನ್ನು ನೀವು ಛಲವಾದಿ ನಾರಾಯಣ ಸ್ವಾಮಿ ಅಂತ ಕರೆಯುತ್ತೀರಿ. ವಾಸ್ತವದಲ್ಲಿ ಅವನನ್ನು ಛಲವಾದಿ ನಾಲಾಯಕ್ಕು ಸ್ವಾಮಿ ಅಂತ ಕರೆಯಬೇಕು. ನಾನು ಸವಾಲು ಎದುರಿಸಲು ಸಿದ್ಧ. ಅವರಿಗೆ ತಾಕತ್ತು ಇದ್ದರೆ ಸಾಮೂಹಿಕ ವೇದಿಕೆ ನಿಗದಿ ಮಾಡಿ ಕರೆಯಲಿ ನಾನು ಉತ್ತರ ಕೊಡುತ್ತೇನೆ. ಅವರ ವೇದಿಕೆಗೆ ನಾನು ಹೋಗುವುದಿಲ್ಲ. ಜನರ ವೇದಿಕೆಗೆ ಅವರು ಬರಲಿ. ನಮ್ಮ ತಂಟೆಗೆ ಬಂದರೆ ಉತ್ತರ ಕೊಡುತ್ತೇವೆಯೇ ಹೊರತು ಬೇರೆಯವರ ತಂಟೆಗೆ ನಾವು ಹೋಗುವುದಿಲ್ಲ’ ಎಂದು ಅಶೋಕ್‌ ಕುಮಾರ್‌ ರೈ ಹೇಳಿದರು.