ADVERTISEMENT

ಟೂಲ್‌ಕಿಟ್‌ ಎಂದರೆ ಬಾಂಬ್‌ ಅಲ್ಲ: ಶಾಸಕ ಯು.ಟಿ.ಖಾದರ್

ರೈತರ ಪರವಾಗಿ ಹೋರಾಡುವುದೇ ತಪ್ಪಾ?: ಶಾಸಕ ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 14:02 IST
Last Updated 16 ಫೆಬ್ರುವರಿ 2021, 14:02 IST
ಶಾಸಕ ಯು.ಟಿ.ಖಾದರ್
ಶಾಸಕ ಯು.ಟಿ.ಖಾದರ್   

ಮಂಗಳೂರು: ‘ಟೂಲ್‌ಕಿಟ್ ಎಂದರೆ ಬಾಂಬ್‌ ಅಲ್ಲ. ಪ್ರತಿ ಪಕ್ಷದ ಐಟಿ ಸೆಲ್‌ಗೂ ಒಂದು ಟೂಲ್‌ಕಿಟ್‌ ಇರುತ್ತದೆ. ಇದು ಕೇವಲ ಮುಕ್ತ ದಾಖಲೆ. ಇದರಲ್ಲಿ ಯಾವುದೇ ರಹಸ್ಯ ವಿಚಾರವಿಲ್ಲ’ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ತಮಗೆ ಬಂದ ಟೂಲ್‌ಕಿಟ್‌ ಅನ್ನು ಫಾರ್ವರ್ಡ್‌ ಮಾಡಿದ್ದಾರೆ. ಆದರೆ, ಕೇಂದ್ರವು ಬೆಲೆಯೇರಿಕೆ, ರೈತರ ಹೋರಾಟದಿಂದ ಜನರ ದಿಕ್ಕು ತಪ್ಪಿಸುವ ಸಲುವಾಗಿ ಅದನ್ನೇ ಬಾಂಬ್‌ನಂತೆ ಬಿಂಬಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ರೈತರ ಪರವಾಗಿ ನಿಲ್ಲುವವರನ್ನು ಮೌನಗೊಳಿಸುವುದು. ರೈತರ ಪ್ರತಿಭಟನೆಯನ್ನು ಹತ್ತಿಕ್ಕುವುದು ಇವರ ಉದ್ದೇಶ. ದಿಶಾ ರವಿ ಬಂಧನದ ಬಗ್ಗೆ ರಾಜ್ಯ ಸರ್ಕಾರ ಮೌನ ಮುರಿಯಬೇಕು. ಬಂಧನವು ಕೇಂದ್ರ ಸರ್ಕಾರದ ದಮನಕಾರಿ ನೀತಿಯಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ ಹರಣವಾಗಿದೆ’ ಎಂದು ಖಂಡಿಸಿದರು.

ADVERTISEMENT

‘ಬೆಂಗಳೂರಿನ ಯುವತಿಯನ್ನು ಬಂಧಿಸಿದಾಗ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಏಕೆ ಮೌನವಾಗಿದ್ದಾರೆ? ಜಿಎಸ್‌ಟಿ, ಭಾಷೆ ಸೇರಿದಂತೆ ಎಲ್ಲ ವಿಚಾರದಲ್ಲೂ ಕೇಂದ್ರದ ದಬ್ಬಾಳಿಕೆಗೆ ರಾಜ್ಯ ಸರ್ಕಾರ ಮೌನವಾಗಿದೆ’ ಎಂದು ಕಿಡಿಕಾರಿದರು.

‘ಇಂದಿರಾಗಾಂಧಿ ತಮ್ಮ ಜೀವವನ್ನು ಬಲಿ ನೀಡಿ ಖಾಲಿಸ್ತಾನ ವಿಚಾರವನ್ನು ಮಟ್ಟ ಹಾಕಿದ್ದರು. ಮತ್ತೆ ಖಾಲಿಸ್ತಾನ ಎಲ್ಲಿಂದ ಬಂತು ಎಂದು ತಿಳಿಯುತ್ತಿಲ್ಲ’ ಎಂದರು.

ಬಜೆಟ್‌ನಲ್ಲಿ ತುಂಬೆ-ಸಜಿಪ ಸೇತುವೆ, ವಿದ್ಯಾರ್ಥಿವೇತನ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಇತರ ಯೋಜನೆಗಳು, ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅನ್ನು ಘೋಷಿಸುವಂತೆ ಮನವಿ ಮಾಡಲಾಗಿದೆ. ಈ ಹಿಂದೆ ಬಜೆಟ್‍ನಲ್ಲಿ ಘೋಷಣೆಯಾದ ಉಡುಪಿ-ಕೊಣಾಜೆ ಜ್ಞಾನ ಮತ್ತು ಆರೋಗ್ಯ ಕಾರಿಡಾರ್, ಕರಾವಳಿ ಪ್ರವಾಸೋದ್ಯಮ ಸರ್ಕೀಟ್, ಮೆಟ್ರೋ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದರು.

ಆಯುರ್ವೇದ ಘಟಕ

‘ಉಳ್ಳಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕ ನಿರ್ಮಾಣಕ್ಕೆ ₹35 ಲಕ್ಷ ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಅಲೋಪತಿ ಮತ್ತು ಆಯುರ್ವೇದವು ಗ್ರಾಮೀಣಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ಕಡೆ ದೊರೆಯುವುದು ಜಿಲ್ಲೆಯಲ್ಲಿ ಇದೇ ಪ್ರಥಮ. ಪಾರಂಪರಿಕ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ’ ಎಂದರು.

ಉಳ್ಳಾಲ ಕ್ರಿಕೆಟ್ ಬೋರ್ಡ್‌ ಅಧ್ಯಕ್ಷ ರಿಯಾಜ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾಕ್ಷಿ, ಉಪಾಧ್ಯಕ್ಷ ಅಯೂಬ್, ಇಕ್ಬಾಲ್, ಹಸೈನಾರ್, ಅಲ್ತಾಫ್‌ ಮಯ್ಯದ್ದಿ, ನಜೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.