ಮಂಗಳೂರು: ‘ಕಬಕದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಕ್ರಮ ನಡೆಸುವಲ್ಲಿ ಲೋಪ ಎಸಗಿದ್ದರೆ ಅದರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಲು ಅವಕಾಶ ಇತ್ತು. ಬದಲಾಗಿ ಸ್ವಾತಂತ್ರ್ಯ ದಿನದ ರಥವನ್ನು ಕೆಲವರು ತಡೆದು ನಿಲ್ಲಿಸಿರುವುದು ಸರಿಯಲ್ಲ’ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾವರ್ಕರ್ ಬ್ರಿಟಿಷರಿಗೆ ಸೆರೆ ಸಿಕ್ಕ ಸಂದರ್ಭದಲ್ಲಿ ಬರೆದ ಕ್ಷಮಾಪಣಾ ಪತ್ರ, ಗಾಂಧಿ ಹತ್ಯೆಯ ಆರೋಪಿಯಾಗಿ ವಿಚಾರಣೆ ಎದುರಿಸಿರುವ ಹಿನ್ನೆಲೆಯಲ್ಲಿ ಅವರು ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಬಗ್ಗೆ ಸಾಕಷ್ಟು ವಿಭಿನ್ನ ಅಭಿಪ್ರಾಯಗಳಿವೆ. ಆದರೆ ಅದಕ್ಕಾಗಿ ಕಬಕ ಗ್ರಾಮ ಪಂಚಾಯಿತಿ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ತಡೆ ಒಡ್ಡಿರುವುದು ಸರಿಯಲ್ಲ. ಈ ರೀತಿಯ ದುಡುಕಿನ ಚಟುವಟಿಕೆ, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾವ ಸಮುದಾಯಕ್ಕೂ ಸೂಕ್ತವಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯೂಬ್ ಮಂಚಿಲಾ, ಬಾಝಿಲ್ ಡಿಸೋಜ, ರವಿ ತೊಕ್ಕೊಟ್ಟು, ಮುಸ್ತಫಾ, ರಾಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.