ADVERTISEMENT

ನೀರಿನ ಸಮಸ್ಯೆ: ಸರ್ಕಾರದ ತಾತ್ಸಾರ– ಕಾಮತ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 5:07 IST
Last Updated 22 ಮಾರ್ಚ್ 2024, 5:07 IST
ವೇದವ್ಯಾಸ ಕಾಮತ್
ವೇದವ್ಯಾಸ ಕಾಮತ್    

ಮಂಗಳೂರು: ಬರಗಾಲ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬರದಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸದೆ ರೈತರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ಜೊತೆಗೆ ಹಿಂದೆ ರಾಜ್ಯ ಸರ್ಕಾರ ಪ್ರೋತ್ಸಾಹಧನದ ನೀಡುತ್ತಿತ್ತು. ಕಾಂಗ್ರೆಸ್‌ ಸರ್ಕಾರ ಇದನ್ನು ಸ್ಥಗಿತಗೊಳಿಸಿದೆ. ಅವೈಜ್ಞಾನಿಕ ವಿದ್ಯುತ್ ದರ ಏರಿಕೆ ಮಾಡಿದ ಪರಿಣಾಮ ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ. ಬಿಜೆಪಿ ಸರ್ಕಾರ ತಂದಿದ್ದ ರೈತ ಸಂಪದ ಯೋಜನೆ, ಜೀವನ್ ಜ್ಯೋತಿ ವಿಮಾ ಯೋಜನೆ ಸ್ಥಗಿತಗೊಳಿಸಲಾಗಿದೆ’ ಎಂದರು.

ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಲ್ಲಿ ಸರ್ಕಾರ ಅಸಹಾಯಕವಾಗಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರ್ಕಾರ ತಾತ್ಸಾರ ಭಾವ ತೋರುತ್ತಿದೆ. ಕರಾವಳಿಯಲ್ಲೂ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದರು.

ADVERTISEMENT

ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರಕ್ಕೆ ಅದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ನಗರ ಪೊಲೀಸ್ ಕಮಿಷನರ್ ಜೊತೆಯೂ ಈ ಬಗ್ಗೆ ಮಾತನಾಡಲಾಗಿದೆ. ಅಕ್ರಮ ಕಸಾಯಿಖಾನೆಯನ್ನೂ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

‘ಪರಿವಾರದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದು, ಗಡಿಪಾರು ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಮನೆಯ ಹಟ್ಟಿಯಲ್ಲಿ ಕಟ್ಟಿದ್ದ ಗೋವನ್ನು ಎತ್ತಿಕೊಂಡು ಹೋಗಲು ಬಂದಾಗ ಪ್ರತಿಭಟಿಸಿದ, ಲವ್ ಜಿಹಾದ್ ಹೆಸರಿನಲ್ಲಿ ಮನೆಯ ಮಗಳಿಗೆ ತೊಂದರೆ ಕೊಟ್ಟಾಗ ವಿರೋಧಿಸಿದವರ ಮೇಲೆ ಪ್ರಕರಣ ದಾಖಲಿಸುವುದು ಖಂಡನೀಯ. ಸಂಸ್ಕೃತಿಯ ಉಳಿವಿಗೆ ಮಾಡಿರುವ ಕೆಲಸವನ್ನು ಕಾನೂನು ಕೈಗೆತ್ತಿಕೊಳ್ಳುವುದು ಎಂದು ಹೇಳಿದರೆ ಹೇಗೆ? ಆಟೊರಿಕ್ಷಾದಲ್ಲಿ ಬಂದು ಭಯೋತ್ಪಾದನೆ ಮಾಡಿದವರ ಜೊತೆ ಇವರನ್ನು ತುಲನೆ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರಮುಖರಾದ ನಿತಿನ್ ಕುಮಾರ್, ಸಂಜಯ್ ಪ್ರಭು, ಪ್ರೇಮನಾಥ್ ಶೆಟ್ಟಿ, ವಸಂತ್ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.