ADVERTISEMENT

ಮತಗಳು ಪೋಲಾಗದಂತೆ ಅಗತ್ಯ ಮುಂಜಾಗ್ರತೆ: ಸುದರ್ಶನ ಮೂಡುಬಿದಿರೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 13:35 IST
Last Updated 27 ನವೆಂಬರ್ 2021, 13:35 IST
ಸುದರ್ಶನ ಎಂ.
ಸುದರ್ಶನ ಎಂ.   

ಮಂಗಳೂರು: ‘ವಿಧಾನ ಪರಿಷತ್‌ ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗಿದೆ. ಪ್ರತಿ ಮಂಡಲಗಳ ಮೂಲಕ ಚುನಾವಣಾ ತಯಾರಿ ನಡೆಸಲಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಸಾಧಿಸಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡಂತೆ ಇರುವ 6 ಸಾವಿರ ಮತದಾರರ ಪೈಕಿ 3,700 ಮತದಾರರು ಬಿಜೆಪಿ ಬೆಂಬಲಿತರಾಗಿದ್ದಾರೆ. ಈ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ಮಾತ್ರ ಚಲಾಯಿಸಲಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ ಈಗಾಗಲೇ ಚುನಾವಣಾ ನಿರ್ವಹಣಾ ಸಮಿತಿ ರಚಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಹಿಂದೆ ಕೆಲವು ಮತಗಳು ಪೋಲಾಗಿದ್ದವು. ಆದರೆ, ಈ ಬಾರಿ ಮುಂಜಾಗ್ರತೆ ವಹಿಸಲಾಗಿದ್ದು, ಮತದಾನ ಯಾವ ರೀತಿ ಮಾಡಬೇಕು ಎಂಬುದರ ಕುರಿತು ಬಿಜೆಪಿಯ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಡಿ.1 ರಿಂದ 7 ರವರೆಗೆ ಮತದಾನ ಜಾಗೃತಿ ನಡೆಯಲಿದೆ. ಪಕ್ಷದ ಮಹಾಶಕ್ತಿ ಕೇಂದ್ರದ ಮೂಲಕ ಈ ಕಾರ್ಯ ಮಾಡಲಾಗುತ್ತಿದೆ. ಮತ ಅಸಿಂಧು ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳು ಮನೆ ಮನೆಗೆ ತಲುಪಿವೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನಗಳು ದೊರೆಯುವ ಮೂಲಕ ಹಲವು ಸವಲತ್ತು ದೊರೆತಿವೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಕೂಡ ಹೆಚ್ಚಳವಾಗಿದೆ. ಇವೆಲ್ಲವೂ ಬಿಜೆಪಿ ಅಭ್ಯರ್ಥಿಗಳಿಗೆ ಪೂರಕವಾಗಿ ಪರಿಣಮಿಸಿದ್ದು, ಬಿಜೆಪಿ ಅಭ್ಯರ್ಥಿಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.

ಶಾಸಕ ಡಾ.ವೈ.ಭರತ್ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಬಿಜೆಪಿ ಪ್ರಮುಖರಾದ ಕಸ್ತೂರಿ ಪಂಜ, ಜಗದೀಶ್‌ ಶೇಣವ, ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.