ಮಂಗಳೂರು: ಮರಳು ಮತ್ತು ಕೆಂಪುಕಲು ಕಾನೂನುಬದ್ಧವಾಗಿ ಸಿಗುವಂತಾಗಬೇಕು. ನಿಯಮ ಸರಳೀಕರಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿನಂತಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪುಕಲ್ಲಿನ ರಾಜಧನವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಕ್ರಮ ಆಗಬೇಕಾಗಿದೆ. ರಾಜ್ಯ ಸರ್ಕಾರ ಎಲ್ಲವನ್ನೂ ಕಾನೂನುಬದ್ಧಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದು, ಬಿಜೆಪಿಯವರು ಇದೇ ಸಂದರ್ಭವನ್ನು ಬಳಸಿಕೊಂಡು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ ಎಂದರು.
‘ಇ–ಆಟೊರಿಕ್ಷಾಗಳಿಗೆ ಉಚಿತ ಪರವಾನಗಿ ಪಡೆದು ಇತರ ಆಟೊರಿಕ್ಷಾಗಳಂತೆ ಬಾಡಿಗೆಗೆ ಅವಕಾಶ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ಪ್ರಶ್ನೆ ಕೇಳಿದ್ದೆ. ಸಾರಿಗೆ ಸಚಿವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ವಿಳಂಬ ಆದಾಗ ಭರವಸೆ ಸಮಿತಿಯಲ್ಲಿಯೂ ಪ್ರಶ್ನಿಸಿದ ಪರಿಣಾಮ, ಈಗ ಆದೇಶವಾಗಿದೆ. ಇದರಿಂದ ಆಟೊರಿಕ್ಷಾಗಳ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದರು.
ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಐವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹4,09,943 ಮೊತ್ತದ ಪರಿಹಾರದ ಪತ್ರವನ್ನು ವಿತರಿಸಲಾಯಿತು. ಮಿಸ್ಬಾ ಅಬ್ದುಲ್ ಖಾದರ್ ಉಡುಪಿ ಅವರಿಗೆ ₹ 2 ಲಕ್ಷ, ಕುಂಜತ್ತ್‌ಬೈಲ್ ಕುದ್ರುತ್ತುಲ್ಲ ಅವರಿಗೆ ₹ 94,943, ಅಸೀದಾ ಭಾನು ಬಜಪೆ ಅವರಿಗೆ ₹64 ಸಾವಿರ, ರೊಬಾರ್ಟ್ ನಜರತ್ ಬಿಜೈ ಅವರಿಗೆ ₹35 ಸಾವಿರ, ಸಪ್ನಾಜ್ ಫರಂಗಿಪೇಟ್ ಅವರಿಗೆ ₹16 ಸಾವಿರ ಮೊತ್ತದ ಪರಿಹಾರಧನದ ಪತ್ರವನ್ನು ಐವನ್ ಡಿಸೋಜ ಹಸ್ತಾಂತರಿಸಿದರು.
ಪ್ರಮುಖರಾದ ಸಲೀಂ, ನಾಗೇಂದ ಕುಮಾರ್, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಳ್‌ಬಾಗ್, ಸುರೇಂದ್ರ ಕಂಬಳಿ, ಪ್ರವೀಣ್ ಜೇಮ್ಸ್, ಮೀನಾ ಟೆಲ್ಲಿಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.