ADVERTISEMENT

ಕುಕ್ಕೆ: ಸರ್ಕಾರ ಮಧ್ಯ ಪ್ರವೇಶಿಸಲಿ

ಸರ್ಕಾರಕ್ಕೆ ತೇಜಸ್ವಿನಿ ಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 13:51 IST
Last Updated 31 ಆಗಸ್ಟ್ 2018, 13:51 IST

ಸುಬ್ರಹ್ಮಣ್ಯ: ‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಹತ್ವ ಕಡಿಮೆಗೊಳಿಸಿ, ಮಠದ ಮಹತ್ವ ಹೆಚ್ಚುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ನಿಲ್ಲಿಸುವ ಕೆಲಸ ಆಗಬೇಕು. ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ನಡುವಿನ ಗೊಂದಲ ನಿವಾರಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಒತ್ತಾಯಿಸಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು.

‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಇಲ್ಲಿನ ಮಠಕ್ಕೂ ಸಂಬಂಧವಿಲ್ಲ. ದೇವರಿಗೆ ಭಕ್ತರು ಅರ್ಪಿಸುವ ಸೇವೆ, ಹರಕೆಗಳನ್ನು ಬೇರೆ ಕಡೆ ನಡೆಸಲು ಅವಕಾಶ ನೀಡಬಾರದು. ಅಭಿವೃದ್ಧಿಗೆ ತಡೆಯೊಡ್ಡುವ ಮತ್ತು ಕ್ಷೇತ್ರದ ಭಕ್ತರ ಹಣವನ್ನು ಲೂಟಿ ಮಾಡುವುದಕ್ಕೆ ಅವಕಾಶ ನೀಡಬಾರದು. ಇದಕ್ಕೆಲ್ಲ ಕಡಿವಾಣ ಬೀಳಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿ, ಸುರಕ್ಷತೆಗಾಗಿ ಕುಕ್ಕೆಯನ್ನು ಪ್ರಾಧಿಕಾರವನ್ನಾಗಿಸಬೇಕು’ ಎಂದು ಅಭಿಪ್ರಾಯ ಪಟ್ಟರು.

ADVERTISEMENT

ಡಿ.ಸಿ ಗೆ ಶ್ಲಾಘನೆ: ‘ಅತಿವೃಷ್ಟಿಯ ಪರಿಣಾಮ ಶಿರಾಡಿ ರಾಷ್ಟ್ರೀಯ ಸಂಪರ್ಕ ಕಡಿತಗೊಂಡಿದ್ದರಿಂದ ಮುಂಬೈಯಿಂದ ಬಂದ ಆರು ಸಿಖ್ ಚಾಲಕರು ಕಂಟೇನರ್ ಸಹಿತ ಗುಂಡ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸ್ಪಂದಿಸಿದೆ. ಸಂಘಟನೆಯ ಮನವಿಯಂತೆ ನಾನು ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಚಾಲಕರು ಸುರಕ್ಷಿತವಾಗಿ ಊರು ತಲುಪಿದ್ದಾರೆ. ಜಿಲ್ಲಾಧಿಕಾರಿ ಸ್ಪಂದಿಸಿದ್ದು ಶ್ಲಾಘನೀಯ’ ಎಂದರು.

ಕಿಶೋರು ಶಿರಾಡಿ, ಮೋನಪ್ಪ ಮಾನಾಡು, ಸತೀಶ್ ಕೂಜುಗೋಡು, ಜಗದೀಶ ಕಟ್ಟೆಮನೆ, ಶಿವರಾಮ ರೈ, ಶ್ರೀಕುಮಾರ, ಶ್ರೀನಾಥ್ ಭಟ್, ಹರಿಶ್ಚಂದ್ರ ಕೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.