ADVERTISEMENT

ಕುಡುಪು: ಗುಂಪು ಹಲ್ಲೆಯಿಂದಲೇ ಯುವಕ ಸಾವು ದೃಢ; 15 ಮಂದಿ ಸೆರೆ

ಮರಣೋತ್ತರ ಪರೀಕ್ಷೆಯಲ್ಲಿ ದೃಢ, ಕೃತ್ಯದಲ್ಲಿ 30ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 9:20 IST
Last Updated 29 ಏಪ್ರಿಲ್ 2025, 9:20 IST
<div class="paragraphs"><p>ಅನುಪಮ್ ಅಗ್ರವಾಲ್</p></div>

ಅನುಪಮ್ ಅಗ್ರವಾಲ್

   

ಮಂಗಳೂರು: 'ನಗರದ ಹೊರವಲಯದ ಕುಡುಪುವಿನಲ್ಲಿ ಯುವಕನೊಬ್ಬ ಭಾನುವಾರ ಮೃತಪಟ್ಟಿದ್ದು, ಇದಕ್ಕೆ ಗುಂಪು ಹಲ್ಲೆಯೇ ಕಾರಣ. ಬಲವಾದ ಹಲ್ಲೆಯಿಂದ ದೇಹದೊಳಗೆ ಆಗಿರುವ ಗಾಯಗಳಿಂದ ಯುವಕ ಸತ್ತಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ. ಆತನಿಗೆ ಹಲ್ಲೆ ನಡೆಸಿದ 15 ಆರೋಪಿಗಳನ್ನು ಬಂಧಿಸಿದ್ದೇವೆ' ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಅವರು,‘ಕುಡುಪು ತಿರುವೈಲು ಗ್ರಾಮದ ನಡುಮನೆಯ ಸಚಿನ್ ಟಿ. (26 ವರ್ಷ), ದೇವದಾಸ್ (50), ತಿರುವೈಲ್‌ ಗ್ರಾಮದ ಮಂಗಳನಗರದ ಮಂಜುನಾಥ್ (32), ನೀರುಮಾರ್ಗ ಪದಮಲೆ ಸುಬ್ರಹ್ಮಣ್ಯ ನಗರದ ಸಾಯಿದೀಪ್ (29), ಮಂಗಳನಗರ ನಿತೇಶ್ ಕುಮಾರ್ ಅಲಿಯಾಸ್‌ ಸಂತೋಷ್ (33), ಕುಡುಪು ಕಟ್ಟೆ ನಡುಮನೆಯ ದೀಕ್ಷಿತ್ ಕುಮಾರ್ (32), ವಾಮಂಜೂರು ದೇವರ ಪದವು ನಿವಾಸಿ ಸಂದೀಪ್ ( 23), ಕುಡುಪು ನಡುಮನೆ9ನೇ ಅಡ್ಡರಸ್ತೆ ಬಳಿನಿವಾಸಿ ವಿವಿಯನ್ ಆಳ್ವಾರಿಸ್ (41), ಕುಡುಪುಕಟ್ಟೆಯ ಶ್ರೀದತ್ತ (32), ಕದ್ರಿ ಕೈಬಟ್ಟಲ್‌ನ ರಾಹುಲ್ (23), ಕುಲಶೇಖರ ಜ್ಯೋತಿ ನಗರದ ಪ್ರದೀಪ್ ಕುಮಾರ್ (35) ವರ್ಷ, ಪದವು ಗ್ರಾಮದ ಶಕ್ತಿನಗರ ಬೌಲ್ಯದ ಮನೀಷ್ ಶೆಟ್ಟಿ (21), ಕುಡುಪುಕಟ್ಟೆ, ನೆಕ್ಕರೆ ರಸ್ತೆಯ ಧನುಷ್ (31), ಕುಲಶೇಖರದ ದೀಕ್ಷಿತ್ (27), ಕುಡುಪು ದೇವಸ್ಥಾನದ ಬಳಿ ನಿವಾಸಿ ಕಿಶೋರ್ ಕುಮಾರ್ (37) ಬಂಧಿತರು. ಇನ್ನುಳಿದ ಆರೋಪಿಗಳ ಪತ್ತೆಗೂ ಕ್ರಮ ವಹಿಸಲಾಗಿದೆ. ಆರೋಪಿಗಳು ಯಾವುದೇ ಸಂಘಟನೆಗೆ ಸೇರಿದವರು ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಅವರು ತಿಳಿಸಿದರು.

ADVERTISEMENT

‘ಇದೇ 27ರಂದು (ಭಾನುವಾರ) ಸಂಜೆ ಸುಮಾರು 5.30 ಗಂಟೆಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಯುವಕ ಮೃತದೇಹ ಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಪರಾಧ ಸ್ಥಳ ಪರಿಶೀಲನಾ ತಜ್ಞರನ್ನು ಹಾಗೂ ವಿಧಿವಿಜ್ಞಾನ ತಜ್ಞರ ಸಂಚಾರ ತಂಡವನ್ನು ಕರೆಯಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಮೃತದೇಹದಲ್ಲಿ ಗಂಭೀರ ಗಾಯಗಳು ಕಂಡುಬಂದಿರಲಿಲ್ಲ. ಸಿಕ್ಕ ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿ ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದೆವು. ನಗರದ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ತಜ್ಞವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಪ್ರಾಥಮಿಕ ವರದಿ ನೀಡಿದ್ದಾರೆ. ಅದರ ಪ್ರಕಾರ, ಮೃತ ಯುವಕನ ಬೆನ್ನಿನ ಭಾಗದಲ್ಲಿ ಬಲವಾದ ಹೊಡೆತದ ಬಹಳಷ್ಟು ಗಾಯಗಳಾಗಿದ್ದು, ಅದರಿಂದ ಉಂಟಾದ ರಕ್ತಸ್ರಾವ, ಆಘಾತ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದು ದೃಢಪಟ್ಟಿದೆ’ ಎಂದು ಅವರು ವಿವರಿಸಿದರು.

‘ಪೊಲೀಸರ ಇನ್ನೊಂದು ತಂಡವು ಕ್ರಿಕೆಟ್ ಪಂದ್ಯದ ವೇಳೆ ನಡೆದ ಬೆಳವಣಿಗೆಗಳ ಮಾಹಿತಿ ಕಲೆಹಾಕಿದೆ. ಅದರ ಪ್ರಕಾರ ಇದು ಗುಂಪು ಹಲ್ಲೆಯಿಂದ ಆಗಿರುವ ಸಾವು ಎಂದು ಖಚಿತ ಪಟ್ಟಿದೆ. ಭಾನುವಾರ ಮಧ್ಯಾಹ್ನ3 ಗಂಟೆಗೆ ಸುಮಾರಿಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಆ ಸಮಯದಲ್ಲಿ ಯುವಕ ಅಲ್ಲಿಗೆ ಹೋಗಿದ್ದ. ಅಲ್ಲಿ ಕ್ರಿಕೆಟ್ ಆಡುತ್ತಿದ್ದವರಿಗೂ ಆತನಿಗೂ ಜಗಳ ನಡೆದಿತ್ತು. ಆರೋಪಿ ಸಚಿನ್‌ ಆತನಿಗೆ ಹಲ್ಲೆ ನಡೆಸಿದ್ದ. ನಂತಹ ಅಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಸೇರಿ ಆತನ ಮೇಲೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಸ್ಥಳದಲ್ಲಿದ್ದ ಕೆಲವರು ತಡೆಯಲು ಯತ್ನಿಸಿದರೂ ಕೇಳದೇ ಹಲ್ಲೆ ನಡೆಸಿದ್ದರು. ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ’ ಎಂದು ವಿವರಿಸಿದರು.

ಪತ್ತೆಯಾಗಿಲ್ಲ ಮೃತನ ಗುರುತು: ‘ಮೃತನ ಹೆಸರು ವಿಳಾಸ ಇನ್ನೂ ಗೊತ್ತಾಗಿಲ್ಲ. ಆತನ ಗುರುತು ಪತ್ತೆ ಹಚ್ಚುವ ಸಲುವಾಗಿ ಭಾವಚಿತ್ರವನ್ನು ಹಂಚಿಕೊಂಡಿದ್ದೇವೆ. ಆತ ಬಿಹಾರಿ ಅಥವಾ ಪಶ್ಚಿಮ ಬಂಗಾಳದ ಕಾರ್ಮಿಕ ಆಗಿರಬಹುದು ಎಂದು ಕೆಲವರು ತಿಳಿಸಿದ್ದಾರೆ. ಆತ ಮಲಯಾಳ ಮಾತನಾಡುತ್ತಿದ್ದ ಎಂದೂ ಕೆಲವರು ತಿಳಿಸಿದ್ದಾರೆ. ಮೃತ ವ್ಯಕ್ತಿ ಯಾವ ಧರ್ಮದವನು ಎಂದೂ ಗೊತ್ತಾಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಕಮಿಷನರ್‌ ತಿಳಿಸಿದರು.

–0–

‘ಗುಂಪು ಹಲ್ಲೆ– ಮೊದಲ ಪ್ರಕರಣ’

ಕುಲಶೇಖರ ಕೇಶವ ಕಂಪೌಂಡ್‌ನ ನಿವಾಸಿ ದೀಪಕ್ ಕುಮಾರ್ (33) ಈ ಕೃತ್ಯದ ಕುರಿತು ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 103(2) (ಐದಕ್ಕಿಂತ ಹೆಚ್ಚು ಜನರ ಗುಂಪು ಸೇರಿ ನಡೆಸುವ ಹಲ್ಲೆ) , 115 (2) (ಸ್ವಯಂಪ್ರೇರಿತ ಹಲ್ಲೆ), ಸೆಕ್ಷನ್‌ 189(2) (ಅಕ್ರಮ ಕೂಟ), ಸೆಕ್ಷನ್‌ 190 (ಸಮಾನ ಉದ್ದೇಶದಿಂದ ಕೂಟರಚನೆ), ಸೆಕ್ಷನ್‌ 191(1) (ಗುಂಪು ರಚಿಸಿಕೊಂಡು ಗಲಭೆ), ಸೆಕ್ಷನ್‌ 191(3) (ಗುಂಪು ರಚಿಸಿಕೊಂಡು ಶಸ್ತ್ರ ಬಳಸಿ ಗಲಭೆ) , ಸೆಕ್ಷನ್‌ 240 (ಅಪರಾಧ ಕೃತ್ಯದ ಕುರಿತು ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಬಿಎನ್‌ಎಸ್‌ನಲ್ಲಿ ಗುಂಪು ಹಲ್ಲೆಗೆ ಪ್ರತ್ಯೇಕವಾದ ಸೆಕ್ಷನ್‌ 103(2) ಸೆಕ್ಷನ್‌ ಅಳವಡಿಸಲಾಗಿದೆ. ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈ ಸೆಕ್ಷನ್ ಅಡಿ ದಾಖಲಾದ ಮೊದಲ ಪ್ರಕರಣವಿದು. ಬಹುಶಃ ರಾಜ್ಯದಲ್ಲೂ ಈ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಇದೇ ಮೊದಲು ಎನಿಸುತ್ತದೆ’ ಎಂದು ಕಮಿಷನರ್‌ ತಿಳಿಸಿದರು.

–0–

‘ಮಾಜಿ ಕಾರ್ಪೊರೇಟರ್‌ ಪತಿ ಭಾಗಿ?’

‘ಈ ಗಲಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಒಬ್ಬರ ಪತಿ ರವೀಂದ್ರ ಅವರು ಭಾಗಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಕಮಿಷನರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಯುವಕ ಏಕಾಏಕಿ ಸ್ಥಳಕ್ಕೆ ಹೋಗಿದ್ದ. ಆತ ಯಾವ ತಂಡದ ಪರವಾಗಿಯೂ ಕ್ರಿಕೆಟ್‌ ಆಡಿರಲಿಲ್ಲ. ಆತ ಮದ್ಯಪಾನ ಮಾಡಿದ್ದಾನೋ ಇಲ್ಲವೋ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ’ ಎಂದರು.

’ಯುವಕ ಭಾರತ ವಿರೋಧಿ ಘೋಷಣೆ ಕೂಗಿದ್ದ’ ಎಂಬ ವದಂತಿ ಕುರಿತು ಪ್ರತಿಕ್ರಿಯಿಸಿದ ಕಮಿಷನರ್, ‘ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.