ADVERTISEMENT

ಬ್ಯಾರಿ ಲಿಪಿ ಕಲಿಕೆಗೆ ಮೊಬೈಲ್ ಆ್ಯಪ್

ಗೂಗಲ್‌ನಲ್ಲಿ ಈ ಲಿಪಿ ಸೇರಿಸಲು ಅಕಾಡೆಮಿಯಿಂದ ಪ್ರಯತ್ನ

ಸಂಧ್ಯಾ ಹೆಗಡೆ
Published 15 ಸೆಪ್ಟೆಂಬರ್ 2020, 8:40 IST
Last Updated 15 ಸೆಪ್ಟೆಂಬರ್ 2020, 8:40 IST
ರಹೀಂ ಉಚ್ಚಿಲ್
ರಹೀಂ ಉಚ್ಚಿಲ್   

ಮಂಗಳೂರು: ಬ್ಯಾರಿ ಭಾಷೆಗೆ ಸ್ವತಂತ್ರ ಲಿಪಿಯನ್ನು ರೂಪಿಸಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು, ಈ ಲಿಪಿಯ ಕಲಿಕೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಮೊಬೈಲ್ ಆ್ಯಪ್‌ವೊಂದನ್ನು ಸಿದ್ಧಪಡಿಸುತ್ತಿದೆ. ಇನ್ನು ಒಂದು ತಿಂಗಳಿನಲ್ಲಿ ಜಸ್ಟ್ ಕನ್ನಡ ಮಾದರಿಯ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.

ಬ್ಯಾರಿ ಲಿಪಿಯ ವರ್ಣಮಾಲೆ, ಪದಗಳ ಜೋಡಣೆ, ಶಬ್ದಗಳ ಭಾಷಾಂತರ ಹೀಗೆ ಕಲಿಕೆಯ ಪ್ರಾಥಮಿಕ ಹಂತವನ್ನು ಕೇಂದ್ರೀಕರಿಸಿ ಆ್ಯಪ್ ರೂಪುಗೊಳ್ಳುತ್ತಿದೆ. ’ಭಾಷೆಯ ಜ್ಞಾನವಿದ್ದರೂ, ಹೊಸ ಲಿಪಿಯ ಮೂಲಕ ಓದಲು ಆರಂಭಿಕ ಹಂತದಲ್ಲಿ ಕಷ್ಟವಾಗುತ್ತದೆ. ಹೀಗಾಗಿ, ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಬರೆದ ವಾಕ್ಯಗಳು ಬ್ಯಾರಿ ಲಿಪಿಗೆ ತರ್ಜುಮೆಯಾಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ‍ಆ ಮೂಲಕ ಲಿಪಿ ಕಲಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಲ್ ತಿಳಿಸಿದರು.

‘ಬ್ಯಾರಿ ಲಿಪಿ ಹೆಚ್ಚು ಜನರನ್ನು ತಲುಪಲು ಅನುವಾಗುವಂತೆ, ಬೋರ್ಡ್‌ಗಳ ಮೇಲೆ ‍‍ಪದಗಳು, ವಾಕ್ಯ ರಚನೆ ಮಾಡಿ, ಅವುಗಳ ವಿಡಿಯೊ ಚಿತ್ರೀಕರಣ ನಡೆಸಿ, ಯೂಟ್ಯೂಬ್‌, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಯೋಚನೆಯಿದೆ. ಆಸಕ್ತರಿಗೆ 15 ದಿನಗಳ ಲಿಪಿ ಕಲಿಕೆ ಕೋರ್ಸ್ ನಡೆಸುವ, ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. 2021ನೇ ಇಸವಿಯ ಕ್ಯಾಲೆಂಡರ್‌ ಅನ್ನು ಸಂಪೂರ್ಣ ಬ್ಯಾರಿ ಲಿಪಿಯಲ್ಲೇ ಹೊರ ತರಲು ತಯಾರಿ ನಡೆದಿದೆ. ಅದರಲ್ಲಿ ಸುರುಮಾದ(ಜನೆವರಿ)ದಿಂದ ಕಡೇಮಾದ(ಡಿಸೆಂಬರ್‌)ವರೆಗೆ, ಎಲ್ಲ ಅಂಕಿ–ಸಂಖ್ಯೆಗಳು, ವಾರಗಳು ಬ್ಯಾರಿ ಲಿಪಿಯಲ್ಲೇ ಇರುತ್ತವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಲಿಪಿ ಬಿಡುಗಡೆಗೊಳಿಸಿದ ಒಂದೇ ದಿನದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರು ಸ್ಪಂದಿಸಿದ್ದಾರೆ. ಅನೇಕರು ತಮ್ಮ ಹೆಸರನ್ನು, ಹುಟ್ಟಿದ ದಿನಾಂಕ, ತಿಂಗಳನ್ನು ಬ್ಯಾರಿ ಅಕ್ಷರದಲ್ಲಿ ಬರೆದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪ್ರತಿಕ್ರಿಯೆ ನಮ್ಮ ಉತ್ಸಾಹವನ್ನು ಇಮ್ಮಡಿಸಿದೆ. ಗೂಗಲ್‌ನಲ್ಲಿ ಈ ಲಿಪಿಯನ್ನು ಅಳವಡಿಸುವ ಸಂಬಂಧ ಪತ್ರ ವ್ಯವಹಾರ ನಡೆಸಿದ್ದೇವೆ. ಇನ್ನು ಆರು ತಿಂಗಳುಗಳೊಳಗೆ ಈ ಕಾರ್ಯ ಪೂರ್ಣಗೊಳ್ಳಬಹುದೆಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.