ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ಮಂಗಳೂರು: ಹಸಿ ತ್ಯಾಜ್ಯವನ್ನು ಹುಳಗಳಿಗೆ ತಿನ್ನಿಸಿ ಪರಿಸರವನ್ನು ಕಾಪಾಡುವ ಮತ್ತು ಜನಜೀವನಕ್ಕೆ ತೊಂದರೆ ಮಾಡದ ಜೈವಿಕ ತಂತ್ರಜ್ಞಾನವನ್ನು ಬಳಸುತ್ತಿರುವ ಮಂಗಳೂರು ನಗರದ ಕಸ ವಿಲೇವಾರಿ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಭಾನುವಾರ ರಾತ್ರಿ ಆಕಾಶವಾಣಿಯಲ್ಲಿ ಪ್ರಸಾರಗೊಂಡ ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದ 124ನೇ ಆವೃತ್ತಿಯಲ್ಲಿ, ಉತ್ತರಾಖಂಡದ ಕೀರ್ತಿನಗರದ ಜನರ ಮತ್ತು ಅರುಣಾಚಲ ಪ್ರದೇಶದ ಜನರ ಪರಿಸರ ಸ್ನೇಹವನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ಅವರು ಮಂಗಳೂರಿನಲ್ಲಿ ಬಳಸುತ್ತಿರುವ ತಂತ್ರಜ್ಞಾನದ ಬಗ್ಗೆಯೂ ಹೇಳಿದರು.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಈ ಜೈವಿಕ ತಂತ್ರಜ್ಞಾನದ ರೂವಾರಿಗಳಾದ ಎಂಟೊ ಪ್ರೊಟೀನ್ಸ್ ಪ್ರೈವೆಟ್ ಲಿಮಿಟೆಡ್‌ನ ಹಿರಿಯ ವ್ಯವಸ್ಥಾಪಕ ಐಮದುಲ್ಲ ಖಾನ್, ‘ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಪರಿಸರ ಸಂರಕ್ಷಣೆಗೆ ಕೊಡುಗೆ ಕೊಡಬಹುದು ಎಂಬುದನ್ನು ತೋರಿಸಿಕೊಟ್ಟ ತಂತ್ರಜ್ಞಾನವೊಂದನ್ನು ಗುರುತಿಸಿ ದೇಶದ ಪ್ರಧಾನಿಯವರೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವುದು ಖುಷಿ ತಂದಿದೆ’ ಎಂದರು.
‘ಭಾರತಕ್ಕೆ ಇದು ಹೊಸ ತಂತ್ರಜ್ಞಾನ. ಇದನ್ನು ಮೊದಲು ಮಂಗಳೂರಿನಲ್ಲಿ ಪ್ರಯೋಗಿಸಲು ಮುಂದಾದೆವು. ಈಗ ಬೆಂಗಳೂರಿಗೂ ಕಾಲಿಟ್ಟಿದ್ದೇವೆ. ಕೊಚ್ಚಿಯಲ್ಲಿ ಬೇರೊಂದು ಕಂಪನಿ ಈಚೆಗೆ ಈ ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದೆ. ಸಮರ್ಪಕವಾಗಿ ವಿಂಗಡಿಸಿದ ಹಸಿ ತ್ಯಾಜ್ಯವನ್ನು ಬ್ಲ್ಯಾಕ್ ಸೋಲ್ಡರ್ ಎಂಬ ಹುಳಕ್ಕೆ ಆಹಾರವಾಗಿ ನೀಡುವುದು ಈ ತಂತ್ರಜ್ಞಾನದ ಸಾರ. ತನ್ನ ದೇಹ ತೂಕಕ್ಕಿಂತ ಐದು ಪಟ್ಟು ತೂಕದಷ್ಟು ಕಸವನ್ನು ಸ್ವಾಹಾ ಮಾಡುವ ಸಾಮರ್ಥ್ಯ ಇರುವ ಈ ಹುಳ ಗಲೀಜು ನೀರನ್ನು ಕೂಡ ಹೀರುವುದರಿಂದ ಒಂದಿಷ್ಟೂ ಕಸವಾಗಲಿ, ದುರ್ವಾಸನೆಯಾಗಲಿ ಉಳಿಯುವುದಿಲ್ಲ’ ಎಂದು ಅವರು ಹೇಳಿದರು.
‘2021ರಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ತಂತ್ರಜ್ಞಾನವನ್ನು 2023ರಿಂದ ಪೂರ್ಣಪ್ರಮಾಣದಲ್ಲಿ ಬಳಸಲಾಗುತ್ತಿದೆ. ಈ ವರೆಗೆ 90 ಸಾವಿರ ಟನ್ ತ್ಯಾಜ್ಯವನ್ನು ನಾಶ ಮಾಡಲಾಗಿದೆ. ನಿತ್ಯ 200 ಟನ್‌ಗಳಷ್ಟು ತ್ಯಾಜ್ಯವನ್ನು ತಿನ್ನುವಷ್ಟು ಹುಳಗಳು ಕಂಪನಿಯಲ್ಲಿವೆ. ಸದ್ಯ ಪ್ರತಿದಿನ 80ರಿಂದ 90 ಟನ್ ತ್ಯಾಜ್ಯ ಬರುತ್ತಿದೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.