
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಮಂಗಳೂರಿನ ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ಆಯೋಜಸಿದ್ದ ಕಾರ್ಯಕ್ರಮದಲ್ಲಿ ‘ಶೇಣಿ ಸಂಸ್ಮರಣೆ ಪ್ರಶಸ್ತಿ’ಯನ್ನು
ಮಂಗಳೂರು: ಯಕ್ಷಗಾನ ತಾಳ ಮದ್ದಲೆ ಅರ್ಥಧಾರಿ, ಪ್ರವಚನಕಾರ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟಬಲ್ ಟ್ರಸ್ಟ್ ಮತ್ತು ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಆಶ್ರಯದಲ್ಲಿ ಗುರುವಾರ ‘ಶೇಣಿ ಸಂಸ್ಮರಣೆ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಇಲ್ಲಿನ ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋಪಾಲಕೃಷ್ಣ ಶಾಸ್ತ್ರಿ, ‘ತಾಳಮದ್ದಳೆಯಲ್ಲಿ ಸ್ತ್ರೀ ಪಾತ್ರಗಳೂ ಮೆರೆಯುವಂತಾಗಬೇಕೆಂಬ ಹಂಬಲ ನನ್ನದು. ಅಂತಹ ಪಾತ್ರಗಳ ಬಗ್ಗೆ ಅಧ್ಯಯನ ಮಾಡಿ, ಅವುಗಳಿಗೆ ಗೌರವ ದಕ್ಕಿಸಲು ಪ್ರಯತ್ನಿಸಿದ್ದೇನೆ. ಶೇಣಿ, ಪೆರ್ಲ, ಸಾಮಗದ್ವಯರು ಸೇರಿದಂತೆ ಅನೇಕ ಪ್ರಸಿದ್ಧ ಅರ್ಥಧಾರಿಗಳು ನನ್ನ ಪ್ರಯತ್ನವನ್ನು ಮೆಚ್ಚಿದರು’ ಎಂದರು.
‘ತಾಳಮದ್ದಲೆ ವೇದಿಕೆಗಳಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಜತೆಗಿನ ಒಡನಾಟದಿಂದಾಗಿ ನಾನು ಅಧ್ಯಯನಶೀಲನಾಗಬೇಕಾಯಿತು. ಹಾಗಾಗಿ ಅವರು ನನ್ನ ಪರೋಕ್ಷ ಗುರುಗಳು. ನನ್ನ ಜನ್ಮದಿನದಂದೇ ಶೇಣಿ ಸಂಸ್ಮರಣೆ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಈ ಹಿಂದೆ ಪೆರ್ಲ ಪ್ರಶಸ್ತಿಯೂ ಜನ್ಮದಿನದಂದೇ ಲಭಿಸಿತ್ತು. ಇದು ನನ್ನ ಪುಣ್ಯ’ ಎಂದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಉಪಾಧ್ಯಕ್ಷ ಜಿ.ಕೆ.ಭಟ್ ಸೇರಾಜೆ ಅಭಿನಂದನಾ ನುಡಿಗಳನ್ನಾಡಿದರು.
ಟ್ರಸ್ಟ್‌ನ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಲೆಕ್ಕಪರಿಶೋಧಕ ಶ್ಯಾಮ ಭಟ್, ಉದ್ಯಮಿ ಶಿವಪ್ರಸಾದ್ ಪ್ರಭು ಭಾಗವಹಿಸಿದ್ದರು.
ಟ್ರಸ್ಟ್‌ನ ಸದಸ್ಯ ಬೆಟ್ಟಂಪಾಡಿ ಸುಂದರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಶೇಣಿ ಬಾಲಮುರಳಿಕೃಷ್ಣ ವಂದಿಸಿದರು. ಟ್ರಸ್ಟಿನ ಕಾನೂನು ಸಲಹೆಗಾರ ಎಂ.ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಮಂಜುಳಾ ಇರಾ ಬಳಗದವರು ಹರಿಕಥೆ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.