ADVERTISEMENT

ಮೂಡುಬಿದಿರೆ | ಅಣೆಕಟ್ಟೆಯೂ ಇದೆ; ಬೋರ್‌ವೆಲ್‌ಗಳೂ ಆಸರೆ...

ಪುಚ್ಚೆಮೊಗರು ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ತೃಪ್ತಿಕರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:04 IST
Last Updated 21 ಫೆಬ್ರುವರಿ 2026, 7:04 IST
ಮೂಡುಬಿದಿರೆಯ ಪುಚ್ಚೆಮೊಗರಿನಲ್ಲಿರುವ ಕಿಂಡಿ ಅಣೆಕಟ್ಟೆ
ಮೂಡುಬಿದಿರೆಯ ಪುಚ್ಚೆಮೊಗರಿನಲ್ಲಿರುವ ಕಿಂಡಿ ಅಣೆಕಟ್ಟೆ   

ಮೂಡುಬಿದಿರೆ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪುಚ್ಚೆಮೊಗರು ಕಿಂಡಿ ಅಣೆಕಟ್ಟೆಯಲ್ಲಿ ಇದುವರೆಗೆ ನೀರಿನ ಕೊರತೆ ಉಂಟಾಗಿಲ್ಲ. ಈ ಬಾರಿಯ ಬೇಸಿಗೆಯಲ್ಲಿ ನಗರವಾಸಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪುಚ್ಚೆಮೊಗರು ನದಿಯಲ್ಲಿ ಸದ್ಯ 4 ಮೀಟರ್‌ನಷ್ಟು ನೀರಿನ ಸಂಗ್ರಹ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲೇ ನೀರಿನ ಸಂಗ್ರಹ ಇದೆ. ಸಮೀಪದಲ್ಲಿರುವ ‘ಸೋಹಂ ಪವರ್ ಪ್ರಾಜೆಕ್ಟ್‌’ ವಿದ್ಯುತ್ ಯೋಜನೆಯವರು ಸಂಗ್ರಹಿಸಿಡುವ ನೀರನ್ನು ತುರ್ತು ಸಂದರ್ಭದಲ್ಲಿ ಬಿಡುವುದರಿಂದ ಪುಚ್ಚೆಮಮೊಗರು ಅಣೆಕಟ್ಟೆಯಲ್ಲಿ ನೀರು ಸಂಗ್ರಹಕ್ಕೆ ಅನುಕೂಲವಾಗಿದೆ. ಪುರಸಭೆ ಸೂಚನೆಯಂತೆ ಕೆಲವು ವರ್ಷಗಳಿಂದ ‘ಸೋಹಂ ಪವರ್ ಪ್ರಾಜೆಕ್ಟ್‌’ನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.

ಪುರಸಭೆ ವ್ಯಾಪ್ತಿಯಲ್ಲಿ ಸದ್ಯ 6,810 ಗೃಹಬಳಕೆ ಮತ್ತು 474 ವಾಣಿಜ್ಯ ಬಳಕೆಯ ನೀರಿನ ಸಂಪರ್ಕಗಳಿವೆ. ಈ ಪೈಕಿ ಹೆಚ್ಚಿನ ನೀರಿನ ಬಳಕೆದಾರರಿಗೆ ಪುಚ್ಚಮೊಗರು ಅಣೆಟ್ಟೆಯಿಂದ ನೇರವಾಗಿ ಸರಬರಾಜು ಆಗುತ್ತಿದೆ. ಈಗಾಗಲೇ 173 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಇವುಗಳ ಮೂಲಕವು ನೀರು ಸರಬರಾಜು ಮಾಡಲಾಗುತ್ತಿದೆ.

ADVERTISEMENT

ಎರಡು ವರ್ಷಗಳಿಂದ ಪುಚ್ಚೆಮೊಗರಿನ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇರಲಿಲ್ಲ. ಮಳೆ ವಿಳಂಬವಾದರೆ ಈ ಬಾರಿ ಸಮಸ್ಯೆ ಉಂಟಾಗಬಹುದು. ಸಾಮಾನ್ಯವಾಗಿ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ನೀರಿನ ಸಮಸ್ಯೆ ಉಂಟಾದಲ್ಲಿ ಪುರಸಭೆಯು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತದೆ.

ಪುಚ್ಚೆಮೊಗರು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಇರುವುದರಿಂದ ಪುರಸಭೆ ವ್ಯಾಪ್ತಿಯಲ್ಲಿ ಸದ್ಯ ಕುಡಿಯುವ ನೀರಿನ ಕೊರತೆ ಇಲ್ಲ. ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಲಾಗಿದೆ ಇಂದು
ಎಂ. ಮುಖ್ಯಾಧಿಕಾರಿ ಪುರಸಭೆ ಮೂಡುಬಿದಿರೆ

ಬೋರ್‌ವೆಲ್ ಕೊರೆಸಿ

ಪರ್ಯಾಯ ವ್ಯವಸ್ಥೆ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ನೀರಿನ ಅಗತ್ಯತೆಯೂ ಹೆಚ್ಚುತ್ತಿದೆ. ಇದಕ್ಕೆ ಹೊಸ ಬೋರ್‌ವೆಲ್‌ ಕೊರೆಯವ ಮೂಲಕ ಪುರಸಭೆ ಪರ್ಯಾಯ ವ್ಯವಸ್ಥೆ ಮಾಡುತ್ತಿದೆ. ಈ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ 7 ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಪುರಸಭೆ ಮುಂದಾಗಿದೆ. ಕರಿಂಜೆ ಕಲ್ಲಬೆಟ್ಟು ಗ್ರಾಮದ ಧವಳ ನಗರದಲ್ಲಿ ಕೊಳವೆ ಬಾವಿ ಬತ್ತಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯಾಗುತ್ತಿದೆ. ಉಳಿದಂತೆ ಇತರ ಕಡೆಗಳಲ್ಲಿ ಈ ಬಾರಿ ಇದುವರೆಗೆ ಸಮಸ್ಯೆ ಎದುರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.