ADVERTISEMENT

ಮೂಡುಬಿದಿರೆ | ಸಂತರ ಆಚರಣೆಯಲ್ಲಿ ಏಕರೂಪ ಸಂಹಿತೆ ಸಂಕಲ್ಪ 

ಮೂಡುಬಿದಿರೆಯಲ್ಲಿ ಸಂತ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:10 IST
Last Updated 27 ಫೆಬ್ರುವರಿ 2026, 8:10 IST
ಮೂಡುಬಿದಿರೆಯ ಜೈನಮಠದಲ್ಲಿ ಗುರುವಾರ ನಡೆದ ಸಂತ ಸಮಾವೇಶವನ್ನು ಹರಿಹರಪುರ ಲಕ್ಷ್ಮೀನರಸಿಂಹ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು
ಮೂಡುಬಿದಿರೆಯ ಜೈನಮಠದಲ್ಲಿ ಗುರುವಾರ ನಡೆದ ಸಂತ ಸಮಾವೇಶವನ್ನು ಹರಿಹರಪುರ ಲಕ್ಷ್ಮೀನರಸಿಂಹ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು   

ಮೂಡುಬಿದಿರೆ (ದಕ್ಷಿಣ ಕನ್ನಡ): ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಅವರ ಸಂಪ್ರದಾಯಕ್ಕೆ ಅನುಗುಣವಾಗಿ ಏಕರೂಪ ಆಚರಣೆಯ ಸಂಹಿತೆಯನ್ನು ಹಾಗೂ ಮಕ್ಕಳ ಭವಿಷ್ಯವನ್ನು ರೂಪಿಸಲು ಸಂಸ್ಕಾರಯುತ ಶಿಕ್ಷಣದ ಅಗತ್ಯದ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಂತ ಸಮಾವೇಶದಲ್ಲಿ ದೃಢ ಸಂಕಲ್ಪ ಕೈಗೊಳ್ಳಲಾಗುವುದು ಎಂದು ಹರಿಹರಪುರ ಲಕ್ಷ್ಮೀನರಸಿಂಹ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಭಾರತೀಯ ಸಂತ ಮಹಾಪರಿಷತ್ತು ಮೂಡುಬಿದಿರೆ ಸಮಿತಿಯಿಂದ ಇಲ್ಲಿನ ಮಹಾವೀರ ಭವನದಲ್ಲಿ ಗುರುವಾರ ನಡೆದ ಆರು ಜಿಲ್ಲೆಗಳ ಸಂತರ ಸಮ್ಮೇಳನವನ್ನು ಉದ್ಘಾಟಿಸಿ ವರು ಮಾತನಾಡಿದರು.

ಭಾರತದ ಸಂಸ್ಕೃತಿ ಸದಾ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾ ಬಂದಿದೆ. ಈ ಸಂಸ್ಕೃತಿ ಎಲ್ಲ ಧರ್ಮಗಳಿಗೂ ತಾಯಿ ಬೇರು ಇದ್ದಂತೆ ಎಂದರು.

ADVERTISEMENT

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ದೇಶ ಪ್ರೇಮ ಯಾವ ಮಟ್ಟದಲ್ಲಿ ಇರಬೇಕು ಎಂಬುದನ್ನು ಶ್ರೀರಾಮ ನಮಗೆ ಕಲಿಸಿಕೊಟ್ಟಿದ್ದಾನೆ. ರಾಮ ಸೇವೆ ಎಂದರೆ ಅದು ದೇಶ ಸೇವೆಗೆ ಸಮಾನ. ಸಂತರ ಏಕತೆ ದೇಶ ಸೇವೆಗೆ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸ್ಫೂರ್ತಿಯಾಗಬೇಕು ಎಂದರು.

ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಸಾಧು–ಸಂತರು ಮತ್ತು ಸಮಾಜ ಜತೆಯಾಗಿ ಮುನ್ನಡೆದಾಗ ದೇಶದಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಆಗದು ಎಂದರು.

ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಮಠಗಳ ಸಂತರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಮೊದಲು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಬಡಗು ಬಸದಿಯಿಂದ ಜೈನಮಠಕ್ಕೆ ಸ್ವಾಮೀಜಿಗಳ ಮೆರವಣೆಗೆ ನಡೆಯಿತು. ಸಮಿತಿ ಸಂಚಾಲಕ ಬಾಹುಬಲಿ ಪ್ರಸಾದ್, ಪ್ರಮುಖರಾದ ದಯಾನಂದ ಪೈ, ಶಾಂತಾರಾಮ ಕುಡ್ವ, ರಾಘವೇಂದ್ರ ಭಂಡಾರ್ಕರ್ ಭಾಗವಹಿಸಿದ್ದರು.

ಬಡಗು ಬಸದಿಯಿಂದ ಜೈನಮಠಕ್ಕೆ ಸ್ವಾಮೀಜಿಗಳ ಮೆರವಣೆಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.