ADVERTISEMENT

ಮೂಡುಬಿದಿರೆ: ಮಕ್ಕಳ ಸಂಚಾರಕ್ಕೆ ಮರದ ಸೇತುವೆಯೇ ಆಧಾರ

ನಿರ್ಮಾಣವಾಗದ ಮಾಂಟ್ರಾಡಿ– ಬಿರ್ಮರಬೈಲು ಸೇತುವೆ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 31 ಜನವರಿ 2025, 7:46 IST
Last Updated 31 ಜನವರಿ 2025, 7:46 IST
ಮೂಡುಬಿದಿರೆ ಸಮೀಪದ ಮಾಂಟ್ರಾಡಿ- ಬಿರ್ಮರಬೈಲು ಮರದ ಸೇತುವೆ ಮೇಲೆ ಶಾಲೆಗೆ ತೆರಳುತ್ತಿರುವ ಮಕ್ಕಳು 
ಮೂಡುಬಿದಿರೆ ಸಮೀಪದ ಮಾಂಟ್ರಾಡಿ- ಬಿರ್ಮರಬೈಲು ಮರದ ಸೇತುವೆ ಮೇಲೆ ಶಾಲೆಗೆ ತೆರಳುತ್ತಿರುವ ಮಕ್ಕಳು    

ಮೂಡುಬಿದಿರೆ: ಕಳೆದ ವರ್ಷದ ಮಳೆಗಾಲದಲ್ಲಿ ಕೊಚ್ಚಿಹೋದ ಮಾಂಟ್ರಾಡಿ ಬಿರ್ಮರಬೈಲು ಸೇತುವೆಯ ಜಾಗದಲ್ಲಿ ಇನ್ನೂ ಹೊಸ ಸೇತುವೆ ನಿರ್ಮಾಣವಾಗಿಲ್ಲ. ಶಾಲಾ ಮಕ್ಕಳು, ಸಾರ್ವಜನಿಕರು ತಾತ್ಕಾಲಿಕವಾಗಿ ಹಾಕಿರುವ ಮರದ ಸೇತುವೆಯನ್ನೇ ಅವಲಂಬಿಸುತ್ತಿದ್ದಾರೆ.

ಕಳೆದ ಜುಲೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಿರ್ಮರಬೈಲು ಸೇತುವೆ ಮೇಲೆ ನೀರು ಹರಿದು ಕೊಚ್ಚಿಹೋಗಿತ್ತು. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಸೇತುವೆ ಕೊಚ್ಚಿಹೋಗಿದ್ದರಿಂದ ಬೋರುಗುಡ್ಡೆಯಿಂದ ನಂದೊಟ್ಟು, ಉಮಿಲೊಕ್ಕು -ಪಣಪಿಲ ಶಾಲೆ ಸಂಪರ್ಕ ಕಡಿತವಾಗಿದೆ. ಇದರಿಂದಾಗಿ ಶಾಲಾ ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಪಣಪಿಲ ಶಾಲೆಗೆ ಹೋಗುವ ಮಕ್ಕಳು ಬೋರುಗುಡ್ಡೆಯಿಂದ ಅಳಿಯೂರು ಪೇಟೆಗೆ ಬಂದು ನೇರಳಕಟ್ಟೆಯಾಗಿ ಆಟೊರಿಕ್ಷಾದಲ್ಲಿ ಹೋಗಬೇಕಾಗುತ್ತದೆ. ಸುಮಾರು ನಾಲ್ಕೈದು ಕಿ.ಮೀ ಸುತ್ತು ಬಳಸಿ ಪ್ರಯಾಣಿಸಬೇಕಿದ್ದು, ಮಕ್ಕಳಿಗೆ ದುಬಾರಿಯಾಗುತ್ತಿದೆ. ಪಣಪಿಲ ನಂದೊಟ್ಟು ಕಂಬಳ ಪರಿಸರದವರು ಧರೆಗುಡ್ಡೆ ಪಂಚಾಯಿತಿ, ಸೊಸೈಟಿಗೆ ಹೋಗುವವರೂ ಬೋರುಗುಡ್ಡೆ ಅಳಿಯೂರು ಮಾರ್ಗವಾಗಿ ಸಂಚರಿಸುವಂತಾಗಿದೆ.

ADVERTISEMENT

ಮಳೆಗಾಲದಲ್ಲಿ ಬಿರ್ಮರಬೈಲು ಸೇತುವೆ ಕೊಚ್ಚಿಹೋದ ಎರಡೇ ವಾರದಲ್ಲಿ ಊರಿನವರು ಹಾಗೂ ಧರೆಗುಡ್ಡೆ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿ ತಾತ್ಕಾಲಿಕವಾಗಿ ಮರದ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಸಂಚರಿಸಲು ಅನುಕೂಲ ಮಾಡಿದ್ದಾರೆ. ಆದರೆ ಇನ್ನೊಂದು ಮಳೆಗಾಲಕ್ಕೆ ಮೊದಲು ಹೊಸ ಸೇತುವೆ ನಿರ್ಮಾಣವಾಗದೆ ಇದ್ದರೆ ಮರದ ಸೇತುವೆಯೂ ನೀರಿನಲ್ಲಿ ಕೊಚ್ಚಿಹೋಗುವ ಭೀತಿ ಕಾಡುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಸೇತುವೆ ನಿರ್ಮಾಣಕ್ಕೆ ಪ್ರಾಕೃತಿಕ ವಿಕೋಪ ಪರಿಹಾರದಿಯಲ್ಲಿ ಜಿಲ್ಲಾಧಿಕಾರಿಯಿಂದ ಸಿಗಬೇಕಾಗಿದ್ದ ಅನುದಾನ ಇನ್ನೂ ಬಂದಿಲ್ಲ. ಹಾಗಾಗಿ ಶಾಸಕರ ನಿಧಿಯಿಂದ ಅನುದಾನ ಕಾಯ್ದಿರಿಸಿ ಒಂದು ತಿಂಗಳೊಳಗೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಡುಬಿದಿರೆ ಸಮೀಪದ ಮಾಂಟ್ರಾಡಿ- ಬಿರ್ಮರಬೈಲು ಮರದ ಸೇತುವೆ ಮೇಲೆ ಶಾಲೆಗೆ ತೆರಳುತ್ತಿರುವ ಮಕ್ಕಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.