ADVERTISEMENT

ತೆಂಕಮಿಜಾರು | ಪರಿಹಾರ ಮೊತ್ತ ಪಾವತಿಸದೆ ಮೊಬೈಲ್ ಟವರ್ ನಿರ್ಮಾಣ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:03 IST
Last Updated 9 ಜನವರಿ 2026, 3:03 IST
ಮೂಡುಬಿದಿರೆಯ ತೆಂಕಮಿಜಾರಿನ ಪಡೀಲ್ ಎಂಬಲ್ಲಿ ರೈತರಿಂದ ಪ್ರತಿಭಟನೆ ನಡೆಯಿತು
ಮೂಡುಬಿದಿರೆಯ ತೆಂಕಮಿಜಾರಿನ ಪಡೀಲ್ ಎಂಬಲ್ಲಿ ರೈತರಿಂದ ಪ್ರತಿಭಟನೆ ನಡೆಯಿತು   

ಮೂಡುಬಿದಿರೆ: ರೈತರಿಗೆ ಸಂಪೂರ್ಣ ಪರಿಹಾರ ಮೊತ್ತ ಪಾವತಿಸದೆ ಮೊಬೈಲ್ ಟವರ್ ನಿರ್ಮಾಣ ಮಾಡಲು ಮುಂದಾದ ಯುಕೆಟಿಎಲ್ ಕಂಪನಿ ಕ್ರಮವನ್ನು ವಿರೋಧಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ತೆಂಕಮಿಜಾರು ಗ್ರಾಮದ ಪಡೀಲು ಎಂಬಲ್ಲಿ ಪ್ರತಿಭಟನೆ ನಡೆಯಿತು.

ರೈತರ ಆಕ್ರೋಶಕ್ಕೆ ಮಣಿದ ಕಂಪನಿಯು ಕಾಮಗಾರಿ ನಿಲ್ಲಿಸಿ ವಾಪಸ್ ತೆರಳಿದೆ.

ಕಂಪನಿಯು ಬಾಧಿತ ರೈತರಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರ ಹಣವನ್ನು ನೀಡದೆ ಕಾಮಗಾರಿ ಆರಂಭಿಸಲು ಮುಂದಾಗಿತ್ತು. ಈ ವಿಷಯ ತಿಳಿದ ಸ್ಥಳೀಯ ಕಿಸಾನ್ ಸಮಿತಿಯ ಅಧ್ಯಕ್ಷ ಪ್ರವೀಣ್ ರೈ, ಪಂಚಾಯಿತಿ ಸದಸ್ಯರಾದ ಹರಿಪ್ರಸಾದ್ ರೈ, ನೇಮಿರಾಜ ಹಾಗೂ ಇತರ ಪ್ರಮುಖರು ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತಡೆದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಾಂತಿ ಪ್ರಸಾದ್ ಹೆಗ್ಡೆ, ರೈತರಿಗೆ ಪೂರ್ಣ ಪರಿಹಾರ ಸಿಗುವವರೆಗೂ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ. ಕಂಪನಿಯು ಕಾನೂನುಬಾಹಿರವಾಗಿ ಅಥವಾ ಬಲಾತ್ಕಾರದಿಂದ ರೈತರ ಜಾಗಕ್ಕೆ ಪ್ರವೇಶಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಬಂದಿದ್ದು, ಈ ವೇಳೆ ರೈತರು, ಕಂಪನಿ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ರೈತರ ಪಟ್ಟು ಸಡಿಲಿಸದ ಕಾರಣ ಕಂಪನಿಯ ಕೆಲಸಗಾರರು ತಮ್ಮ ಸರಕು-ಸಾಮಗ್ರಿಗಳೊಂದಿಗೆ ಸ್ಥಳದಿಂದ ನಿರ್ಗಮಿಸಿದರು.

ನೇಮಿರಾಜ, ಪ್ರವೀಣ್ ಭಂಡಾರಿ, ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.