ADVERTISEMENT

ಎಂಆರ್‌ಪಿಎಲ್‌: ವೆನ್ಲಾಕ್‌ನಲ್ಲಿ ಆಮ್ಲಜನಕ ಘಟಕ

ಸಂಸದ ನಳಿನ್‌ ಸೂಚನೆ: ರಾಜ್ಯದಲ್ಲಿ ಹೆಚ್ಚುವರಿ 4 ಘಟಕ

​ಪ್ರಜಾವಾಣಿ ವಾರ್ತೆ
Published 4 ಮೇ 2021, 3:31 IST
Last Updated 4 ಮೇ 2021, 3:31 IST
ಆಮ್ಲಜನಕ ಉತ್ಪಾದನಾ ಘಟಕ (ಸಾಂದರ್ಭಿಕ ಚಿತ್ರ)
ಆಮ್ಲಜನಕ ಉತ್ಪಾದನಾ ಘಟಕ (ಸಾಂದರ್ಭಿಕ ಚಿತ್ರ)   

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌) ಕೋವಿಡ್–19 ಎರಡನೇ ಅಲೆಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವನ್ನು ಬೆಂಬಲಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಮತ್ತು ರಾಜ್ಯದ ಇತರೆಡೆ 4 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ.

ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತು ಜಿಲ್ಲಾಡಳಿತದ ಮಾರ್ಗದರ್ಶನದಂತೆ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಿಮಿಷಕ್ಕೆ 930 ಎಲ್‌ಪಿಎಂ ಸಾಮರ್ಥ್ಯದ ಘಟಕವನ್ನು ಎಂಆರ್‌ಪಿಎಲ್ ಸ್ಥಾಪಿಸಲಿದೆ. ಎಂಆರ್‌ ಪಿಎಲ್ ಮತ್ತು ಶೆಲ್ ನಡುವಿನ ಜಂಟಿ ಉದ್ಯಮವಾಗಿರುವ ಶೆಲ್- ಎಂಆರ್‌ ಪಿಎಲ್ ಏವಿಯೇಷನ್ ಈ ಯೋಜನೆ ಗಾಗಿ ₹75 ಲಕ್ಷ ಮೊತ್ತವನ್ನು ಹೂಡಿಕೆ ಮಾಡಲಿದೆ. ಈ ಘಟಕಕ್ಕಾಗಿ ₹ 1.12 ಕೋಟಿ ವೆಚ್ಚದಲ್ಲಿ ಸಮಿಟ್ಸ್‌ ಹೈಗ್ರಾನಿಕ್ಸ್‌ ಕಂಪನಿಯ ಜತೆ ಎಂಆರ್‌ಪಿಎಲ್ ಒಡಂಬಡಿಕೆ ಮಾಡಿಕೊಂಡಿದ್ದು, ಕಾರ್ಯಾದೇಶ ನೀಡಲಾಗಿದೆ.

ಈ ದರ ಸ್ಥಾವರವು ನಿಮಿಷಕ್ಕೆ 930 ಲೀಟರ್ ಆಮ್ಲಜನಕ ಉತ್ಪಾದಿಸಲಿದೆ. ಈ ಘಟಕ ಕಂಪ್ರೆರ್‌ಗಳು, ಪಿಎಸ್ಎ ಟ್ಯಾಂಕ್, ಫಿಲ್ಟರ್‌ಗಳು, ಟ್ಯಾಂಕ್‌ಗಳು, ಡ್ರೈಯರ್‌ಗಳನ್ನು ಹೊಂದಿರುತ್ತದೆ. ಶುದ್ಧತೆ ಯೊಂದಿಗೆ 4 ಬಾರ್‌ಗಳ ಆಮ್ಲಜನಕದ ಒತ್ತಡವನ್ನು ಖಚಿತಪಡಿ ಸುತ್ತದೆ. ಇದು ವೈದ್ಯಕೀಯ ಅವಶ್ಯಕತೆ ಆಮ್ಲಜನಕದ ಅಗತ್ಯವನ್ನು ಈ ಘಟಕ ಪೂರೈಸಲಿದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ಸರ್ಕಾರದ ಮಾರ್ಗದರ್ಶನದಂತೆ ರಾಜ್ಯದ ನಾಲ್ಕು ಸ್ಥಳಗಳಲ್ಲಿ ಇನ್ನೂ 4 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಎಂಆರ್‌ಪಿಎಲ್ ಸ್ಥಾಪಿಸಲಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕರ್ನಾಟಕದಲ್ಲಿ 28 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ವಿವಿಧ ತೈಲ ಮತ್ತು ಅನಿಲ ಪಿಎಸ್‌ಯುಗಳಿಗೆ ಮಾರ್ಗದರ್ಶನ ನೀಡಿತ್ತು. ಎಂಆರ್‌ಪಿಎಲ್‌ನ 4 ಘಟಕಗಳು ಹಾಗೂ ಒಎನ್‌ಜಿಸಿ 2 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಿದೆ.

ಈಗಾಗಲೇ ₹ 1.4 ಕೋಟಿ ಮೌಲ್ಯದಲ್ಲಿ 530 ಎಲ್‌ಪಿಎಂ ಉತ್ಪಾದನಾ ಸಾಮರ್ಥ್ಯದ 2 ಘಟಕಗಳಿಗೆ ಅನುಮೋದನೆ ನೀಡಿದೆ. ಕಳೆದ ವರ್ಷ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಎಂಆರ್‌ಪಿಎಲ್ ಜಿಲ್ಲಾ ಆಡಳಿತಕ್ಕೆ ಆಹಾರ ಕಿಟ್‌ಗಳು, ಸ್ಯಾನಿಟೈಸರ್‌ಗಳು, ಮುಖವಾಡಗಳು, ವಲಸೆ ಕಾರ್ಮಿಕರಿಗೆ ಪ್ರಯಾಣ ವ್ಯವಸ್ಥೆ ಮತ್ತು ಅಸಂಘಟಿತ ವಲಯ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಿತ್ತು.

‘ಎಂಆರ್‌ಪಿಎಲ್‌ ಬೆಂಬಲ’
ಕೋವಿಡ್‌ ಸಂಕಷ್ಟದಲ್ಲಿ ನಮ್ಮ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರದ ನಾಗರಿಕರನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಲು ಎಂಆರ್‌ಪಿಎಲ್ ಬದ್ಧವಾಗಿದೆ. ಕೆಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಜಿಲ್ಲಾಡಳಿತದ ಪ್ರಯತ್ನಗಳನ್ನು ನಾವು ಸಂಪೂರ್ಣ ಬೆಂಬಲಿಸುತ್ತೇವೆ’ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.