ADVERTISEMENT

ಮುಡಿಪು-ಮೂಳೂರು ರಸ್ತೆ ಕಾಮಗಾರಿ ಆಮೆಗತಿ: ಸಂಚಾರ ನರಕ

ಮುಡಿಪು-ಮೂಳೂರು ರಸ್ತೆಗೆ ಹಿಡಿದ ಗ್ರಹಣ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 5:34 IST
Last Updated 3 ನವೆಂಬರ್ 2020, 5:34 IST
ಮುಡಿಪು‌–ಮೂಳೂರು ನಡುವಿನ ರಸ್ತೆಯ ದುಃಸ್ಥಿತಿ
ಮುಡಿಪು‌–ಮೂಳೂರು ನಡುವಿನ ರಸ್ತೆಯ ದುಃಸ್ಥಿತಿ   

ಮುಡಿಪು: ಮುಡಿಪು‌ವಿನಿಂದ ಮೂಳೂರುವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿ ಎರಡು ವರ್ಷಗಳಾಗುತ್ತ ಬಂದರೂ ನಿಧಾನಗತಿಯ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ಸಂಚರಿಸುವವರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಮುಡಿಪು ಸಮೀಪದ ಇರಾ ಗ್ರಾಮದ‌ ಮೂಳೂರು ಪ್ರದೇಶಕ್ಕೆ ಕೆಐಡಿಬಿ ವತಿಯಿಂದ ರಸ್ತೆ ವಿಸ್ತರಣೆ ಕಾಮಗಾರಿ‌ ಆರಂಭಿಸಲಾಗಿತ್ತು. ರಸ್ತೆಯ ಅಭಿವೃದ್ಧಿಗಾಗಿ‌ ಮೊದಲಿದ್ದ ಡಾಂಬರು ರಸ್ತೆಯನ್ನೂ ಅಗೆದು ಜಾಗವನ್ನು ವಿಸ್ತರಿಸಲಾಗಿದೆ. ಬಳಿಕ ಹಲವು ತಿಂಗಳುಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಇದರ ಪರಿಣಾಮವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕೆಸರುಮಯ ರಸ್ತೆಯಲ್ಲಿ ಸಂಚಾರ ತೊಡಕಾಗಿತ್ತು. ಹಲವಾರು ವಾಹನಗಳು ಕೆಟ್ಟು ನಿಲ್ಲುವುದು ಸಹ ಸಾಮಾನ್ಯವಾಗಿತ್ತು.

ಬಳಿಕ ಎಚ್ಚೆತ್ತ‌ ಕೆಐಡಿಬಿ, ರಸ್ತೆಗೆ ಜಲ್ಲಿಕಲ್ಲು ಕಾಂಕ್ರೀಟ್ ಹಾಕಿ, ರಸ್ತೆ ಕಾಮಗಾರಿ ಆರಂಭಿಸಿತ್ತು. ಇದೀಗ ಮತ್ತೆ ಕಾಮಗಾರಿಗೆ ಬ್ರೇಕ್ ಬಿದ್ದಿದೆ. ಇದರಿಂದಾಗಿ ಅರೆಬರೆ ಕಾಮಗಾರಿ ಕಾರ್ಯದಿಂದ ಇರಾ, ಮಂಚಿ, ಬಿ.ಸಿ.ರೋಡಿಗೆ ಹೋಗುವ ವಾಹನ ಸವಾರರು‌ ತೊಂದರೆ ಎದುರಿಸುವಂತಾಗಿದೆ. ಅಲ್ಲದೆ ಬಹಳಷ್ಟು ಅಪಘಾತ ಪ್ರಕರಣಗಳೂ ಇಲ್ಲಿ ನಡೆದಿವೆ.

ADVERTISEMENT

ನಿಧಾನಗತಿಯ ಕಾಮಗಾರಿಯಿಂದ ಈ ಭಾಗದ ಜನರು ಸಂಕಷ್ಟ‌ ಎದುರಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಪ್ರಯಾಸದಿಂದ ವಾಹನ ಚಲಾಯಿಸಬೇಕಾಗಿದೆ. ದೊಡ್ಡ ವಾಹನಗಳು ಹೋಗುವಾಗ ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯ ಮೇಲಿರುವ ಜಲ್ಲಿಕಲ್ಲು ಸಿಡಿಯುತ್ತದೆ. ಇದು ತೀರಾ ಅಪಾಯಕಾರಿಯಾಗಿದೆ. ಇನ್ನಾದರೂ ಕಾಮಗಾರಿಗೆ ವೇಗ ದೊರೆತು, ಸರಿಯಾದ ರಸ್ತೆ ನಿರ್ಮಾಣವಾಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.