ADVERTISEMENT

ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಚಾಲನೆ

150ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗಿ, ಯಜಮಾನರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 7:00 IST
Last Updated 1 ಜನವರಿ 2023, 7:00 IST
ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಸಂಪ್ರದಾಯದಂತೆ ಚಾಲನೆ ನೀಡಲಾಯಿತು. 
ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಸಂಪ್ರದಾಯದಂತೆ ಚಾಲನೆ ನೀಡಲಾಯಿತು.    

ಮೂಲ್ಕಿ: ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಅರಸು ವಂಶಸ್ಥರಾದ ಎಂ.ದುಗ್ಗಣ್ಣ ಸಾವಂತರು ಕಾಂತಾಬಾರೆ ಬೂದಾಬಾರೆಯರ ಧರ್ಮ ಚಾವಡಿ ಯಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ಕಿರಣ್ ಕುಮಾರ್ ಶೆಟ್ಟಿ ಅವರಿಗೆ ಅನುಮತಿ ನೀಡುವ ಮೂಲಕ ಶನಿವಾರ ಚಾಲನೆ ನೀಡಲಾಯಿತು.

ಪಡುಪಣಂಬೂರು ಮೂಲ್ಕಿ ಅರಮನೆ ಪುರೋಹಿತ ಅತ್ತೂರು ಬೈಲು ಉಡುಪರು ಪಟ್ಟದ ಅರಮನೆಯಲ್ಲಿ ಪ್ರಾರ್ಥಿಸಿ, ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿಗಳಲ್ಲಿ ವಿಧಿ ವಿಧಾನ ನಡೆಸಲಾಯಿತು. ಬಪ್ಪನಾಡು ದೇವಸ್ಥಾನದಲ್ಲಿ ಪ್ರಾರ್ಥಿಸಿ ಕೊಂಡು ಬಳಿಕ ಕಂಬಳ ಕರೆಯಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿರುವ ಬಪ್ಪನಾಡು ಬಡುಗುಹಿತ್ಲು ವಿನ ದಿ.ಕಾಂತು ಪೂಜಾರಿ ಯಾನೆ ಸೇವೆ ಗಾರ್ ಅವರ ಮನೆತನದ ಕಂಬಳದ ಕೋಣಗಳನ್ನು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಹಾಗೂ ಕೋಶಾಧಿಕಾರಿ ಕಮಲಾಕ್ಷ ಬಡಗುಹಿತ್ಲು ಅವರ ನೇತೃತ್ವದಲ್ಲಿ ಪ್ರಮುಖರಾದ ಕಿಶೋರ್ ಸಾಲ್ಯಾನ್, ಲೀಲಾಧರ ಕೋಟ್ಯಾನ್, ಸತೀಶ್ ಕೋಟ್ಯಾನ್, ಸುರೇಶ್ ಕೋಟ್ಯಾನ್, ನಿತ್ಯಾನಂದ, ಜಿತೇಶ್, ಪ್ರದೀಪ್, ಮಧುಸೂದನ್, ನಿತ್ಯಾನಂದ, ಅಶೋಕ್, ರಮೇಶ್ ಜನನಿ, ಸುರೇಶ್ ಜನನಿ ಕರೆತಂದು ಕರೆಯಲ್ಲಿ ಇಳಿಯಲು ಸೂಚನೆ ಪಡೆದರು. ಕೋಣಗಳ ಮೈಗೆ ಹಚ್ಚಲು ಅರಮನೆಯಿಂದ ಎಣ್ಣೆಯನ್ನು ನೀಡುವ ಸಂಪ್ರದಾಯ ನಡೆಸಲಾಯಿತು. ಕಂಬಳದ ಕರೆಯಲ್ಲಿ ಮೂರು ಬಾರಿ ಸಾಂಪ್ರದಾಯಿಕ ಓಟ ನಡೆಸಿದ ಕೋಣಗಳಿಗೆ ಪೂಜೆ ನಡೆಸಲಾಯಿತು.

ಅರಮನೆ ಗದ್ದುಗೆಯಲ್ಲಿ ಒಂಬತ್ತು ಮಾಗಣೆಯ ಕಂಬಳದ ರಾಜ ಮರ್ಯಾದೆಯ ಗೌರವವನ್ನು ಆರಂಭ ದಲ್ಲಿ ಪಟ್ಟದ ಅರಮನೆಯಲ್ಲಿ ಪೂಜೆ ಸಲ್ಲಿಸಿ, ಅರಸರಿಗೆ ಮರ್ಯಾದೆಯನ್ನು ಧರ್ಮಚಾವಡಿಯಲ್ಲಿ ನೀಡಲಾಯಿತು. ಎರುಬಂಟ ದೈವಗಳ ಜೊತೆಗೆ ಅರಮನೆ ಕೋಣಗಳನ್ನು ಡೋಲು, ವಾದ್ಯ ಬ್ಯಾಂಡ್‌ಗಳ ನಿನಾದ ದೊಂದಿಗೆ ಅರಮನೆಯಿಂದ ಭವ್ಯ ಮೆರವಣಿಗೆಯಲ್ಲಿ ಕಂಬಳದ ಗದ್ದೆಗೆ ತೆರಳಿ ಜೋಡುಕರೆಯಲ್ಲಿ ತೆಂಗಿನಕಾಯಿ, ಹಾಲು, ಅಭಿಷೇಕವನ್ನು ನಡೆಸಿ, ಹಿಂಗಾರದ ಅರ್ಪಣೆಯೊಂದಿಗೆ ಕಂಬಳಕ್ಕೆ ಚಾಲನೆ ನೀಡಲಾಯಿತು. ಅರಮನೆಯ ಗೌರವದ ಸಂಕೇತವಾಗಿ ಅಲ್ಲಿನ ಜೋಡಿ ಕೋಣಗಳು ಕಂಬಳದ ಕರೆಯಲ್ಲಿ ಓಡಿದ ನಂತರ ಸ್ಪರ್ಧಾಗೆ ಕಂಬಳದ ಯಜಮಾನರಿಗೆ ಗೌರವ ಸಲ್ಲಿಸಲಾಯಿತು. ‌

ADVERTISEMENT

ಕನೆ ಹಲಗೆ, ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ ವಿಭಾಗದಲ್ಲಿ ಒಟ್ಟು 150ಕ್ಕೂ ಹೆಚ್ಚು ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ವಿಜೇತರಿಗೆ ಒಟ್ಟು 7.5 ಪವನ್ ಚಿನ್ನದ ಪದಕಗಳು ಬಹುಮಾನವಾಗಿ ಸಮಿತಿ ನೀಡಲಿದೆ.

ಅರಮನೆಯ ಆಶಾಲತಾ, ಗೌತಮ್ ಜೈನ್, ಪವಿತ್ರೇಶ್ ಜೈನ್, ರಕ್ಷಾ, ವಿಶ್ವಜಿತ್ ವರ್ಮ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಐಕಳ ಹರೀಶ್ ಶೆಟ್ಟಿ, ಎಂ.ಎಚ್.ಅರವಿಂದ ಪೂಂಜ, ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೆ.ಭುವನಾಭಿರಾಮ ಉಡುಪ, ಕಕ್ವಗುತ್ತು ಸುಕುಮಾರ್ ಶೆಟ್ಟಿ, ಚಂದ್ರಶೇಖರ್ ಜಿ., ಸುದರ್ಶನ್, ಕಸ್ತೂರಿ ಪಂಜ, ಶಶೀಂದ್ರ ಎಂ. ಸಾಲ್ಯಾನ್, ಸುಚೀಂದ್ರ ಅಮೀನ್ ಬರ್ಕೆ, ಮೋಹನ್ ಕೊಟ್ಯಾನ್ ಶಿಮಂತೂರು, ಜಿನಚಂದ್ರ ಜೈನ್, ಬಂಕಿ ನಾಯ್ಕರು, ಅನಿಲ್‌ ಶ್ಯಾಮ್ ಶೆಟ್ಟಿ, ದರ್ಶನ್ ಜೈನ್, ಗುರು ಎಂ. ರಾವ್, ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ಕೆ. ವಿಜಯಕುಮಾರ್ ಶೆಟ್ಟಿ, ಅಬ್ದುಲ್ ರಜಾಕ್, ದಿನೇಶ್ ಶೆಟ್ಟಿ ಹೊಸಲಕ್ಕೆ, ಶ್ಯಾಂಪ್ರಸಾದ್ ಪಡುಪಣಂಬೂರು, ಚಂದ್ರಹಾಸ್ ಕೋಟ್ಯಾನ್ ಪಡುತೋಟ, ಎಂ.ಕೆ.ಹೆಬ್ಬಾರ್, ಕಿರಣ್ ಕುಮಾರ್, ನವೀನ್ ಕುಮಾರ್ ಬಾಂದಕೆರೆ ಇದ್ದರು.

‘ಕೃಷಿ ಬದುಕಿನ ಜೀವನಾಡಿ ಕಂಬಳ’

ತುಳುನಾಡ ಕೃಷಿ ಬದುಕಿನ ಜೀವನಾಡಿಯಾಗಿರುವ ಕಂಬಳವು ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತೀಕವಾಗಿದೆ. ಪರಂಪರೆಯ ಸಂಪ್ರದಾಯ ಕಂಬಳದಲ್ಲಿ ಪಾಲ್ಗೊಳ್ಳುವುದೇ ವಿಶೇಷವಾಗಿದೆ. ಸರ್ವ ಧರ್ಮ ಸಮನ್ವಯತೆಯ ಸಾಮರಸ್ಯದಿಂದ ನಡೆಯುವ ಈ ಜನಪದ ಕ್ರೀಡೆಗೆ ಮುಕ್ತ ಬೆಂಬಲ ಸಿಗಬೇಕು ಎಂದು ಬಳ್ಕುಂಜೆಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ ಹೇಳಿದರು.

ಮೂಲ್ಕಿ ಸೀಮೆಯ ಅರಸು ಕಂಬಳ ಸಮಿತಿಯ ಸಂಯೋಜನೆಯಲ್ಲಿ ಶನಿವಾರ ಆರಂಭಗೊಂಡ ಸಾಂಪ್ರದಾಯಿಕ ಮೂಲ್ಕಿ ಸೀಮೆ ಅರಸು ಕಂಬಳದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ ಕಂಬಳಕ್ಕೆ ಚಾಲನೆ ನೀಡಿದರು. ಬಪ್ಪನಾಡು ದೇವಳದ ನರಸಿಂಹ ಭಟ್, ವಾದಿರಾಜ ಉಪಾಧ್ಯಾಯ, ವಿನಯಲಾಲ್ ಬಂಗೇರ, ಮಿಥುನ್ ರೈ, ಮಂಜುಳಾ, ಪೂರ್ಣಿಮಾ, ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ಎಚ್. ವಸಂತ ಬೆರ್ನಾಡ್, ಪ್ರಕಾಶ್ ಸುವರ್ಣ, ಜನಾರ್ದನ್ ಪಡುಪಣಂಬೂರು, ಕಲ್ಲಾಪು ರತ್ನಾಕರ ಶೆಟ್ಟಿಗಾರ್, ಶೇಖರ ಶೆಟ್ಟಿ, ಸುರೇಶ್ ಬಂಗೇರ, ಪುಷ್ಪರಾಜ್ ಜೈನ್, ಮೋಹನ್, ಗುಣಪಾಲ ಕಡಂಬ, ಸಮಿತಿಯ ಹಾಗೂ ಮಾಗಣೆಯ ಎಲ್ಲಾ ಗುತ್ತು ಬರ್ಕೆಯ ಪ್ರಮುಖರು ಇದ್ದರು. ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ಕಿರಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ನವೀನ್ ಕುಮಾರ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.