ADVERTISEMENT

ತ್ಯಾಜ್ಯ ಎಸೆಯುವವರಿಗೆ ದಂಡ, ಪ್ರಕರಣ ದಾಖಲು: ಎಚ್ಚರಿಕೆ

ಬೆದ್ರಾಳ ಸೇತುವೆ ಬಳಿಯ ತ್ಯಾಜ್ಯ ತೆರವು: ನಗರಸಭೆಯಿಂದ ಕಾರ್ಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 16:19 IST
Last Updated 7 ಏಪ್ರಿಲ್ 2022, 16:19 IST
ಪುತ್ತೂರು ನಗರ ವ್ಯಾಪ್ತಿಯ ಬೆದ್ರಾಳ ಸೇತುವೆಯ ಬಳಿ ಹೊಳೆಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವನ್ನು ನಗರಸಭೆಯ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹಾಗೂ ನಗರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಪುತ್ತೂರು ನಗರ ವ್ಯಾಪ್ತಿಯ ಬೆದ್ರಾಳ ಸೇತುವೆಯ ಬಳಿ ಹೊಳೆಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವನ್ನು ನಗರಸಭೆಯ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹಾಗೂ ನಗರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.   

ಪುತ್ತೂರು: ನಗರಸಭೆಯ ವ್ಯಾಪ್ತಿಯೊಳಗೆ ಗ್ರಾಮಾಂತರ ಪ್ರದೇಶದಿಂದ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ತ್ಯಾಜ್ಯ ಎಸೆಯುವವರ ಪತ್ತೆಗಾಗಿ ಹಗಲು ಮತ್ತು ರಾತ್ರಿ ಮುತುವರ್ಜಿ ವಹಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದುಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದರು.

ಬೆದ್ರಾಳ ಸೇತುವೆ ಬಳಿ ತ್ಯಾಜ್ಯ ರಾಶಿ ಬಿದ್ದು ಕೊಳೆಯುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ತ್ಯಾಜ್ಯ ತೆರವುಗೊಳಿಸುವ ಕಾರ್ಯ ನಡೆಸಿದ ಅವರು ಅವರು ಮಾತನಾಡಿದರು. ಬೆದ್ರಾಳ ಸೇತುವೆಯ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ. ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ₹ 10 ಸಾವಿರಕ್ಕಿಂತ ಅಧಿಕ ದಂಡ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಕೆಲಸವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುಬ್ರಹ್ಮಣ್ಯ– ಮಂಜೇಶ್ವರ ಅಂತರರಾಜ್ಯ ರಸ್ತೆಯ ಬೆದ್ರಾಳ ಸೇತುವೆ ಬಳಿ ದುರ್ನಾತ ಬೀರುವ ತ್ಯಾಜ್ಯ ತುಂಬಿಕೊಂಡು ಕೊಳಕು ವಾತಾವರಣ ನಿರ್ಮಾವಾಗಿತ್ತು. ಸೇತುವೆಯ ಎರಡೂ ಕಡೆಗಳಲ್ಲಿ ಕೋಳಿ, ಹಸಿಮೀನು ತ್ಯಾಜ್ಯಗಳು, ತರಕಾರಿ ತ್ಯಾಜ್ಯಗಳು, ಪ್ಲಾಸ್ಟಿಕ್, ನಿರುಪಯುಕ್ತ ಆಹಾರ ಪದಾರ್ಥಗಳು ಕೊಳೆತು ದುರ್ನಾತ ಬೀರುತ್ತಿತ್ತು. ಇದು ಈ ಪರಿಸರದ ನಿವಾಸಿಗಳ ನೆಮ್ಮದಿ ಕೆಡಿಸುತ್ತಿತ್ತು. ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಲ್ಲದೆ, ತ್ಯಾಜ್ಯ ತಿನ್ನಲು ಬರುವ ಬೀದಿನಾಯಿಗಳ ಉಪಟಳದಿಂದಾಗಿ ಪರಿಸರದ ಮಂದಿ ಆತಂಕ ಪಡುವಂತಾಗಿತ್ತು.

ADVERTISEMENT

ಬೆದ್ರಾಳ ಪರಿಸರದಲ್ಲಿ ತ್ಯಾಜ್ಯ ಅವ್ಯವಸ್ಥೆಯಿಂದಾಗಿ ಜನತೆಗಾಗುತ್ತಿದ್ದ ಸಮಸ್ಯೆಯ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿದ್ದ ಹಿನ್ನೆಲೆಯಲ್ಲಿ ನಗರಸಭೆಯ ಅಧ್ಯಕ್ಷ ಕೆ.ಜೀವಂಧರ್ ಜೈನ್, ಆಯುಕ್ತ ಮಧು ಎಸ್.ಮನೋಹರ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯಗಳನ್ನು ತೆರವುಗೊಳಿಸುವ ಕೆಲಸ ಮಾಡಿಸಿದರು.

ತ್ಯಾಜ್ಯಗಳನ್ನು ಮಣ್ಣು ಸಹಿತ ಜೆಸಿಬಿ ಮೂಲಕ ತೆರವುಗೊಳಿಸಿ ಕೊಳಕು ವಾತಾವರಣವನ್ನು ಶುಚಿಗೊಳಿಸಲಾಗಿದೆ. ಹೊಳೆಯಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿ ಟಿಪ್ಪರ್ ಮೂಲಕ ಡಂಪಿಂಗ್ ಯಾರ್ಡ್‌ಗೆ ಕೊಂಡೊಯ್ದು ವಿಲೇವಾರಿ ವ್ಯವಸ್ಥೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.