ಮಂಗಳೂರು: ಮೂಲ್ಕಿಯಲ್ಲಿ ನಡೆದ ಕೊಲೆ ಆರೋಪಿಯೊಬ್ಬ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಬಳಿಕ ಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಆತನನ್ನು ಇಲ್ಲಿನ ಪೋಲೀಸರು ಬಂಧಿಸಿದ್ದಾರೆ.
ಮುಲ್ಕಿ ವಿಜಯ ಸನ್ನಿಧಿ ಸಮೀಪ ಹೆದ್ದಾರಿ ಬಳಿ 2020 ರ ಜೂನ್ 5ರಂದು ಹಾಡುಹಗಲೇ ನಡೆದಿದ್ದ ಅಬ್ದುಲ್ ಲತೀಫ್ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತಾ ಬಂಧಿತ ಆರೋಪಿ. ಈ ಪ್ರಕರಣ ಸಂಬಂಧ ಮುಲ್ಕಿ ಠಾಣೆ ಪೊಲೀಸರು ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಸೆರಿದಂತೆ ಒಟ್ಟು 10 ಜನರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಆರೋಪಿಗೆ 2020ರ ಅ. 10 ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಸುಪ್ರೀಂ ಕೋರ್ಟ್ 2022ರ ಏ. 22ರಂದು ಆತನ ಜಾಮೀನು ರದ್ದುಪಡಿಸಿತ್ತು. ಬಳಿಕ ಆರೋಪಿಯು ನಕಲಿ ಪಾಸ್ ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಆರೋಪಿಯು ಅಕ್ರಮವಾಗಿ ಒಮನ್ ದೇಶದಿಂದ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ. ಈ ಬಗ್ಗೆಯೂ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಆರೋಪಿ ಕುರಿತು ಸುಳಿವು ಪಡೆದ ಪೊಲೀಸರ ವಿಶೇಷ ತಂಡ ಮೂಲ್ಕಿಯ ಪಕ್ಷಿಕೆರೆ ಬಳಿ ಸೋಮವಾರ ಆತನನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.
ಆರೋಪಿ ನಕಲಿ ಪಾಸ್ ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಮೂಲ್ಕಿ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ.
ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಆತನ ವಿರುದ್ದ ಎರಡು ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.