ADVERTISEMENT

ಮಂಗಳೂರು| ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಹೆಚ್ಚು ಸುಸ್ಥಿರ: ಮುರಳೀಧರ ಶೆಣೈ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:22 IST
Last Updated 13 ಜನವರಿ 2026, 6:22 IST
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ವತಿಯಿಂದ ಕೆನರಾ ರೊಬೆಕೊ ಸಹಯೋಗದಲ್ಲಿ ಮಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ಮಾರ್ಟ್ ಭವಿಷ್ಯದ ಹೂಡಿಕೆದಾರರ ಜಾಗೃತಿ’  ಕಾರ್ಯಕ್ರಮದಲ್ಲಿ ಮುರಳೀಧರ ಶೆಣೈ ಮಾತನಾಡಿದರು: ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ವತಿಯಿಂದ ಕೆನರಾ ರೊಬೆಕೊ ಸಹಯೋಗದಲ್ಲಿ ಮಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ಮಾರ್ಟ್ ಭವಿಷ್ಯದ ಹೂಡಿಕೆದಾರರ ಜಾಗೃತಿ’  ಕಾರ್ಯಕ್ರಮದಲ್ಲಿ ಮುರಳೀಧರ ಶೆಣೈ ಮಾತನಾಡಿದರು: ಪ್ರಜಾವಾಣಿ ಚಿತ್ರ   

ಮಂಗಳೂರು: ‘ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಇತರ ಯಾವುದೇ ಹೂಡಿಕೆಗಳಿಗಿಂತಲೂ ಹೆಚ್ಚು ಪ್ರತಿಫಲವನ್ನು ಒದಗಿಸುತ್ತದೆ. ದೀರ್ಘಾವಧಿಗೆ ಹೂಡಿಕೆದಾರರಿಗೆ 10 ವರ್ಷಗಳಿಂದ ಈಚೆಗೆ ವಾರ್ಷಿಕ ಶೇ 12ರಿಂದ ಶೇ 15ರ ದರದಲ್ಲಿ ಪ್ರತಿಫಲ ಸಿಕ್ಕಿದೆ. ಇದರಲ್ಲಿ ಹೂಡಿಕೆ ಸುಲಭ ಹಾಗೂ ಹೆಚ್ಚು ಸುಸ್ಥಿರ. ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ ಅಷ್ಟು ಪ್ರತಿಫಲವೂ ಜಾಸ್ತಿ’ ಎಂದು ಕೆನರಾ ರೊಬೆಕೊ ಸಂಸ್ಥೆಯ ಮಂಗಳೂರು ವಲಯದ ಉಪಾಧ್ಯಕ್ಷ ಮುರಳೀಧರ ಶೆಣೈ ತಿಳಿಸಿದರು.  

ಕೆನರಾ ರೊಬೆಕೊ ಕಂಪನಿಯು ‘ಪ್ರಜಾವಾಣಿ’ ಸಹಯೋಗದಲ್ಲಿ ಇಲ್ಲಿ ಸೋಮವಾರ ಆಯೋಜಿಸಿದ್ದ ‘ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮ್ಯೂಚುವಲ್ ಫಂಡ್ ಹೂಡಿಕೆ ನಿರ್ವಹಣೆ ಬಗ್ಗೆ ಸಲಹೆ ನೀಡಿದರು. 

‘ಮ್ಯೂಚುವಲ್ ಫಂಡ್‌ನಲ್ಲಿ ಅಪಾಯ ಇಲ್ಲವೆಂದಲ್ಲ. ಮಾರುಕಟ್ಟೆ ಬಗ್ಗೆ ತಿಳಿದುಕೊಂಡರೆ ಅಂತಹ ಪ್ರಮೇಯ ಎದುರಾಗದು. ಮಾರುಕಟ್ಟೆಯ ವಿಜ್ಞಾನ ಗೊತ್ತಿರುವ ನುರಿತ ಹಣಕಾಸು ನಿರ್ವಹಣೆ ಅಧಿಕಾರಿಗಳೇ ಹೂಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗಾಗಿ ಹೂಡಿಕೆದಾರರು ನಷ್ಟ ಅನುಭವಿಸುವ ಸಾಧ್ಯತೆ ಕಡಿಮೆ’ ಎಂದರು.

ADVERTISEMENT

‘ರಸ್ತೆ ದಾಟುವಾಗಲೂ ಅಪಘಾತ ಸಂಭವಿಸುವ ಅಪಾಯ ಇರುತ್ತದೆ. ಎಚ್ಚರ ವಹಿಸಿ ರಸ್ತೆ ದಾಟಿದರೆ ಅಪಾಯದಿಂದ ಪಾರಾಗಬಹುದು. ಎಚ್ಚರ ವಹಿಸಿದರೆ ಮ್ಯೂಚುವಲ್ ಫಂಡ್‌ ಕೂಡಾ ಸುರಕ್ಷಿತ. ಅಪಾಯದ ಬಗ್ಗೆ ಚಿಂತೆ ಮಾಡಿ ಹೂಡಿಕೆಯನ್ನು ಮುಂದೂಡಬೇಡಿ. ಈ ಹೂಡಿಕೆಯಲ್ಲಿ ತಕ್ಷಣ ಪ್ರತಿಫಲ ಸಿಗದಿರಬಹುದು. ಕನಿಷ್ಠ ಐದರಿಂದ ಏಳು ವರ್ಷ ಕಾದರೆ ಹೂಡಿಕೆಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಮಾರುಕಟ್ಟೆಯ ಸಣ್ಣಪುಟ್ಟ ಏರುಪೇರುಗಳಿಂದ ವಿಚಲಿತವಾಗಬೇಕಿಲ್ಲ’ ಎಂದರು.

‘ಹಿಂದೆಲ್ಲ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಭಾರಿ ಪ್ರಮಾಣದಲ್ಲಿ ಹಿಂಪಡೆದಾಗ ಷೇರು ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಯಾಗುತ್ತಿತ್ತು. ದೇಶದ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಶೇ 24ರಿಂದ  ಶೇ 17ಕ್ಕೆ ಇಳಿದಿದೆ. ದೇಶಿ ಸಂಸ್ಥೆಗಳೂ ಈಗ ಮಾರುಕಟ್ಟೆಯ ಮೇಲೆ ನಿಯಂತ್ರಣ ಹೊಂದಿರುವುದರಿಂದ  ವಿದೇಶಿ ಹೂಡಿಕೆ ಹಿಂತೆಗೆತವು ಹಿಂದಿನಷ್ಟು ಪರಿಣಾಮ ಬೀರುವುದಿಲ್ಲ’ ಎಂದರು.  

‘ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಅರ್ಥವ್ಯವಸ್ಥೆ ಚೆನ್ನಾಗಿದೆ. ದೇಶವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. 2025–26ರಲ್ಲೂ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಸರಿ ಸುಮಾರು ಶೇ 7.5ರ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ನಮ್ಮಲ್ಲಿ ತಲಾ ಆದಾಯ ₹2.34 ಲಕ್ಷ ಇದೆ. ಪ್ರಸ್ತುತ ದೇಶವು ₹ 3.97 ಲಕ್ಷ ಕೋಟಿ (4.4 ಟ್ರಿಲಿಯನ್ ಡಾಲರ್) ಆರ್ಥಿಕತೆಯನ್ನು ಹೊಂದಿದ್ದು, 2047ರ ವೇಳೆಗೆ ಇದು ₹27.03 ಲಕ್ಷ ಕೋಟಿಗೆ (30 ಟ್ರಿಲಿಯನ್ ಡಾಲರ್) ಹೆಚ್ಚಳವಾಗುವ ನಿರೀಕ್ಷೆಯಿದೆ. ಮ್ಯೂಚುವಲ್ ಫಂಡ್‌ನ ಹೂಡಿಕೆ ಮಾಡಿದರೆ ಹಣದುಬ್ಬರದಿಂದ ಆಗುವ ನಷ್ಟವನ್ನೂ ಮೀರಿ ಲಾಭ ಗಳಿಸುವ ಅವಕಾಶ ಜಾಸ್ತಿ’ ಎಂದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ವತಿಯಿಂದ ಕೆನರಾ ರೆಬೆಕ್ಕೊ ಸಹಯೋಗದಲ್ಲಿ ಮಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ಮಾರ್ಟ್ ಭವಿಷ್ಯದ ಹೂಡಿಕೆದಾರರ ಜಾಗೃತಿ’  ಕಾರ್ಯಕ್ರಮದಲ್ಲಿ ಮುರಳೀಧರ ಶೆಣೈ ಮಾತನಾಡಿದರು: ಪ್ರಜಾವಾಣಿ ಚಿತ್ರ
ಪೂಜಾ ಕಿರಣ್ ಶೇಟ್‌
ಅಮರ್ ಸುವರ್ಣ
ಜೆರಾಲ್ಡ್‌ ಟವರ್ಸ್
ಅಬು ಸಾಲಿಯ
ಜಿ.ಕೆ.ಭಟ್
ಅನಿಲ್ ಕುಮಾರ್
ನನಗೆ ಮ್ಯೂಚುವಲ್ ಫಂಡ್‌ ಬಗ್ಗೆ ಅಷ್ಟಾಗಿ ತಿಳಿವಳಿಕೆ ಇರಲಿಲ್ಲ. ಈ ಕಾರ್ಯಾಗಾರದಲ್ಲಿ ಸಾಕಷ್ಟು ವಿಚಾರ ತಿಳಿಯಿತು. ಹೂಡಿಕೆ ಮಾಡುವ ಬಗ್ಗೆ ಆಸಕ್ತಿಯೂ ಮೂಡಿದೆ
ಪೂಜಾ ಕಿರಣ್ ಶೇಟ್‌
ಷೇರು ಮಾರುಕಟ್ಟೆಯಲ್ಲಿ ವಿದೇಶಿ ಪಾರಮ್ಯ ಕಡಿಮೆಯಾಗಿ ದೇಶಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿದ್ದರಿಂದ ಆಗಿರುವ ಪರಿಣಾಮವನ್ನು ಶೆಣೈ ಅವರು ಮನವರಿಕೆ ಮಾಡಿದರು. ಮ್ಯೂಚುವಲ್‌ ಫಂಡ್ ಮೇಲೆ ವಿಶ್ವಾಸ ಹೆಚ್ಚಿದೆ
ಅನಿಲ್ ಕುಮಾರ್‌
ಇದೊಂದು ಅತ್ಯುತ್ತಮ ಕಾರ್ಯಾಗಾರ. ಮ್ಯೂಚುವಲ್ ಫಂಡ್‌ನ ಎಸ್‌ಐಪಿ ಮತ್ತಿತರ ಯೋಜನೆಗಳ ಬಗ್ಗೆ ಚೆನ್ನಾಗಿ ವಿವರಿಸಿದರು. ಹೂಡಿಕೆ ಆರಂಭಿಸುವವರಿಗೆ ಇದು ತುಂಬಾ ಪ್ರಯೋಜನಕಾರಿ
ಅಬು ಸಾಲಿಹ
ಇಂತಹ ಮಾಹಿತಿ ಜನರಿಗೆ ಅಗತ್ಯ. ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಇಲ್ಲಿ ಪಡೆದ ಅನುಭವ ನನಗೆ ಬಹಳಷ್ಟು ಸಹಕಾರಿ. ನಾನು ಈ ಬಗ್ಗೆ ಆದಷ್ಟು ಜನರಿಗೆ ಹಂಚುವ ಪ್ರಯತ್ನ ಮಾಡುತ್ತೇನೆ
ಜೆರಾಲ್ಡ್‌ ಟವರ್ಸ್‌
ಮ್ಯೂಚುವಲ್ ಫಂಡ್‌ ಕುರಿತ ಕಾರ್ಯಾಗಾರ ತುಂಬಾ ಚೆನ್ನಾಗಿತ್ತು. ಮಾಹಿತಿ ಪೂರ್ಣವಾಗಿತ್ತು. ಹಣಕಾಸು ನಿರ್ವಹಣೆ ಬಗ್ಗೆ ನಮಗೆ ಗೊತ್ತಿರದ ಅನೇಕ ವಿಚಾರಗಳನ್ನು ಇಲ್ಲಿ ತಿಳಿದುಕೊಂಡಿದ್ದೇವೆ
ಅಮರ್ ಸುವರ್ಣ
ಉತ್ತಮ ಕಾರ್ಯಕ್ರಮ. ಮ್ಯೂಚುವಲ್ ಫಂಡ್‌ಗಳ ಬಗ್ಗೆ ಮುರಳೀಧರ ಶೆಣೈ ಅವರು ಬಹಳ ಚೆನ್ನಾಗಿ ವಿವರಿಸಿದರು. ಇದನ್ನು ಆಯೋಜಿಸಿದ ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಬಳಗಕ್ಕೆ ಧನ್ಯವಾದ.
ಜಿ.ಕೆ.ಭಟ್‌

ಆಯಾ ವರ್ಷವೇ ತೆರಿಗೆ ಪಾವತಿಸಬೇಕಿಲ್ಲ

ಮ್ಯೂಚುವಲ್ ಫಂಡ್‌ನಿಂದ ಗಳಿಸುವ ವರಮಾನಕ್ಕೆ ಆಯಾ ವರ್ಷವೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಅದರಿಂದ ಬರುವ ಲಾಭದ ಮೊತ್ತವನ್ನೂ ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ.  ಹೂಡಿಕೆ ಹಿಂಪಡೆದಾಗ ತೆರಿಗೆ ಪಾವತಿಸಿದರೆ ಸಾಕು ಎಂದು ಮುರಳೀಧರ ಶೆಣೈ ತಿಳಿಸಿದರು.

ನಿರ್ದಿಷ್ಟ ಗುರಿಯೊಂದಿಗೆ ಹೂಡಿಕೆ ಮಾಡಿ

‘ಮ್ಯೂಚುವಲ್ ಫಂಡ್‌ನಲ್ಲಿ ಮಾಡಿದ ಹೂಡಿಕೆಯನ್ನು ಯಾವಾಗ ಬೇಕಾದರೂ ಹಿಂದಕ್ಕೆ ಪಡೆಯಬಹುದು. ಆದರೆ ಹೂಡಿಕೆ ಮಾಡುವಾಗ ದೀರ್ಘಾವಧಿ ಗುರಿ ಇಟ್ಟುಕೊಂಡರೆ ಒಳ್ಳೆಯದು. ಇದರಿಂದ ಲಾಭ ಗಳಿಸುವ ಅವಕಾಶ ಹೆಚ್ಚು ಇರುತ್ತದೆ’ ಎಂದು ಶೆಣೈ ಸಲಹೆ ನೀಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.