ADVERTISEMENT

ರಸ್ತೆಯಲ್ಲಿ ನಮಾಜ್ ಮಾಡಿದ್ದು ಕಂಡರೆ ಕೈಯಲ್ಲಿ ದಂಡ ಹಿಡಿಯುತ್ತೇವೆ: ವಿಎಚ್‌ಪಿ

​ಪ್ರಜಾವಾಣಿ ವಾರ್ತೆ
Published 31 ಮೇ 2024, 23:59 IST
Last Updated 31 ಮೇ 2024, 23:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ಇಲ್ಲಿಯ ಕಂಕನಾಡಿಯ ಮಸೀದಿ‌ ಬಳಿ ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣದಲ್ಲಿ ಪೊಲೀಸರು ಒತ್ತಡಕ್ಕೆ ಮಣಿದು, ತನಿಖೆ ನಡೆಸದೇ ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಸ್ತೆಯಲ್ಲಿ ನಮಾಜ್‌ ಮಾಡಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದೇ ತಪ್ಪು ಎಂದು ಕಾಂಗ್ರೆಸ್‌ ಪ್ರತಿಪಾದಿಸಿದೆ.

‘ರಸ್ತೆ ಮೇಲೆ ನಮಾಜ್ ಮಾಡಿದವರ ಮೇಲೆ‌ ದಾಖಲಿಸಿದ್ದ ಪ್ರಕರಣಕ್ಕೆ ಮರುದಿನವೇ ‘ಬಿ’ ರಿಪೋರ್ಟ್ ಹಾಕಿದಂತೆ, ರಸ್ತೆಯಲ್ಲಿ ನಮಾಜ್‌ ಮಾಡಿದ್ದನ್ನು ಪ್ರಶ್ನಿಸಿದ ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಮೇಲೆ ದಾಖಲಿಸಿರುವ ಪ್ರಕರಣದಲ್ಲೂ ಬಿ ರಿಪೋರ್ಟ್‌ ಸಲ್ಲಿಸಬೇಕು’ ಎಂದು ಒತ್ತಾಯಿಸಿ ವಿಎಚ್‌ಪಿಯವರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

ಈ ವೇಳೆ‌ ಮಾತನಾಡಿದ ವಿಶ್ವಹಿಂದೂ ಪರಿಷತ್‌ ವಿಭಾಗ ಸಂಯೋಜಕ ಪುನೀತ್ ಅತ್ತಾವರ, ‘ಇದೇ ರೀತಿ ರಸ್ತೆಯ ಮೇಲೆ ನಮಾಜ್ ಮಾಡುವ ಕಾರ್ಯ ಮರುಕಳಿಸಿದರೆ, ಎಲ್ಲ ಮಸೀದಿಗಳ ಎದುರು ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಣ ಮಾಡಲಾಗುತ್ತದೆ. ಈಗ ಕೈಯಲ್ಲಿ ಧ್ವಜ ಇದೆ, ಮುಂದೆ ಇದೇ ರೀತಿ ರಸ್ತೆಯಲ್ಲಿ ನಮಾಜ್ ಮಾಡಿದ್ದು ಕಂಡರೆ ನಮ್ಮ ಕೈಯಲ್ಲಿ ದಂಡ ಇರುತ್ತದೆ’ ಎಂದರು.‌

ಹೋರಾಟ: ‘ರಸ್ತೆಯಲ್ಲಿ ನಮಾಜ್‌ ಮಾಡಿದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕಡ್ಡಾಯ ರಜೆ ಶಿಕ್ಷೆ ನೀಡಿರುವುದು ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ರಾಜಕಾರಣದ ಭಾಗವೇ ಆಗಿದೆ. ಪೊಲೀಸರು ಸ್ಥಳ ಮಹಜರು ಸೇರಿ ಯಾವುದೇ ತನಿಖೆ ನಡೆಸದೇ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಸರ್ಕಾರ ನಡೆದುಕೊಂಡ ರೀತಿ ಸಮಾಜದ ಸ್ವಾಸ್ಥ್ಯಕ್ಕೆ ವಿಷ ಹಾಕಿದಂತಿದೆ’ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಇಲಾಖೆ ದ್ವಂದ್ವ ನೀತಿ ಅನುಸರಿಸುತ್ತಿದೆ. ರಾಜ್ಯ ಸರ್ಕಾರ, ಪೊಲೀಸ್‌ ಇಲಾಖೆಗಳೇ ಶಾಂತಿ ಕದಡುವ ಕೆಲಸ ಮಾಡುತ್ತಿವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.