ಮಂಗಳೂರು: ‘ನಂತೂರು ಮೇಲ್ಸೇತುವೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಳೆಗಾಲ ಮುಗಿಯುತ್ತಿದ್ದಂತೆಯೇ ಕಾಮಗಾರಿ ಆರಂಭಿಸಲಿದ್ದೇವೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಜಾವೆದ್ ಆಜ್ಮಿ ಹೇಳಿದರು.
ನಂತೂರು ಹಾಗೂ ಕೆಪಿಟಿಯಲ್ಲಿ ಮೇಲ್ಸೇತುವೆ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗೆ ಸಂಬಂಧಿಸಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಶನಿವಾರ ಇಲ್ಲಿ ಏರ್ಪಡಿಸಿದ್ದ ಸಮನ್ವಯ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
‘ಮೇಲ್ಸೇತುವೆಯ ಕೇಂದ್ರ ಭಾಗದ ಕಾಮಗಾರಿಯನ್ನು ಮೊದಲ ಹಂತದಲ್ಲಿ ಪೂರ್ಣಗೊಳಿಸಿ, ಸರ್ವೀಸ್ ರಸ್ತೆಯನ್ನು ಎರಡನೇ ಹಂತದಲ್ಲಿ ನಿರ್ಮಿಸಲಿದ್ದೇವೆ. ಕೆಪಿಟಿ–ಪಡೀಲ್ ಕಡೆಗೆ ಸಾಗುವ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಮಣ್ಣು ಅಗೆಯಬೇಕಾಗುತ್ತದೆ. ಮೊದಲ ಹಂತದ ಕಾಮಗಾರಿಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ. ಕಾಮಗಾರಿ ಪೂರ್ಣಗೊಳಿಸಲು 2ವರ್ಷ ಬೇಕು’ ಎಂದರು.
‘ನೀರು ಪೂರೈಕೆಯ ಮುಖ್ಯ ಕೊಳವೆಯನ್ನು ಹಾಗೂ ಕೆಲವರು ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸಿದರೆ ಕಾಮಗಾರಿ ತ್ವರಿತವಾಗಿ ಅನುಷ್ಠಾನಗೊಳಿಸಲು ಸಾಧ್ಯ’ ಎಂದರು.
‘ವಿದ್ಯುತ್ ತಂತಿಗಳ ಸ್ಥಳಾಂತರಿಸಲು ಹಾಗೂ ನೆಲದಡಿ ವಿದ್ಯುತ್ ಮಾರ್ಗ ಅಳವಡಿಸಲು ₹ 5 ಕೋಟಿ ವೆಚ್ಚವಾಗಲಿದೆ. ಇದನ್ನು ಭರಿಸಲು ಎನ್‌ಎಚ್‌ಎಐ ಒಪ್ಪುತ್ತಿಲ್ಲ’ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದರು.
‘ನೆಲದ ಮೇಲಿನ ವಿದ್ಯುತ್ ಕೇಬಲ್ ಸ್ಥಳಾಂತರಕ್ಕೆ ತಗಲುವ ಮೊತ್ತವನ್ನು ಎನ್‌ಎಚ್‌ಎಐ ಭರಿಸಲಿದೆ. ನೆಲದಡಿ ಕೇಬಲ್ ಅಳವಡಿಸುವ ವೆಚ್ಚವನ್ನು ಮೆಸ್ಕಾಂ ಭರಿಸಬೇಕು’ ಎಂದು ಕ್ಯಾ.ಚೌಟ ಸೂಚಿಸಿದರು.
ಕುಡಿಯುವ ನೀರಿನ ಮುಖ್ಯ ಕೊಳವೆ ಸ್ಥಳಾಂತರಕ್ಕೆ ₹ 2.5 ಕೋಟಿ ತಗಲುತ್ತದೆ ಎಂದು ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ನರೇಶ್ ಶೆಣೈ ಮಾಹಿತಿ ನೀಡಿದರು. ಈ ವೆಚ್ಚವನ್ನು ಎನ್‌ಎಚ್‌ಎಐ ಭರಿಸಬೇಕು ಎಂದು ಸಂಸದರು ಸೂಚಿಸಿದರು.
‘ಪಾಲಿಕೆ ಸದಸ್ಯರಾದ ಮನೋಹರ ಕದ್ರಿ, ಶಕೀಲಾ ಕಾವ ಹಾಗೂ ಕಾವ್ಯಾ ನಟರಾಜ್ ನೆರವು ಪಡೆದು ಭೂಸ್ವಾಧೀನಕ್ಕೆ ಸಂಬಂಧಿಸಿದ ಬಿಕ್ಕಟ್ಟು ಇತ್ಯರ್ಥಪಡಿಸಬೇಕು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.
ನಂತೂರು, ಕೆಪಿಟಿ, ಪದವು ಜಂಕ್ಷನ್‌ಗಳ ಅಭಿವೃದ್ಧಿಯನ್ನು ಪ್ರತ್ಯೇಕವಾಗಿ ಪರಿಗಣಿಸದೇ, ನಗರದ ಸಮಗ್ರ ಸಂಚಾರ ವ್ಯವಸ್ಥೆಗೆ ಪೂರಕವಾಗಿ ಹೆದ್ದಾರಿ ಅಭಿವೃದ್ಧಿಗೆ ಪರ್ಯಾಯ ಯೋಜನೆ ರೂಪಿಸುವಂತೆಯೂ ಸಲಹೆ ನೀಡಿದರು. ಕ್ರೆಡೈ ರೂಪಿಸಿದ ನೀಲನಕ್ಷೆ ಬಗ್ಗೆ ಸಂಸ್ಥೆಯ ಮಂಗಳೂರು ಘಟಕದ ವಿನೋದ್ ಪಿಂಟೊ ವಿವರಿಸಿದರು.
‘ಕ್ರೆಡೈ ರೂಪಿಸಿದ ಯೋಜನೆ ಪ್ರಕಾರ ಕಾಮಗಾರಿ ಅನುಷ್ಠಾನಕ್ಕೆ ಸಮಯ ಹಾಗೂ ಅನುದಾನ ಹೆಚ್ಚು ಬೇಕಾಗುತ್ತದೆ. ಕಾಮಗಾರಿ ಅನುಷ್ಠಾನಕ್ಕೆ ತಾಂತ್ರಿಕವಾಗಿಯು ಕೆಲ ಸಮಸ್ಯೆಗಳಿವೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಬೇಕಾಗುತ್ತದೆ’ ಎಂದು ಅಜ್ಮಿ ಹೇಳಿದರು.
‘ಕುಂಟಿಕಾನದಿಂದ ಪಂಪ್‌ವೆಲ್‌ವರೆಗೆ ಮೇಲ್ಸೇತುವೆ ನಿರ್ಮಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದರೆ ಇದಕ್ಕೆ ₹ 1ಸಾವಿರ ಕೋಟಿಗಳಷ್ಟು ಅನುದಾನ ಬೇಕಾಗುತ್ತದೆ’ ಎಂದು ಅಜ್ಮಿ ವಿವರಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಮುಲ್ಲೈ ಮುಗಲನ್ ಎಂ.ಪಿ. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.