ADVERTISEMENT

ಮನೆ ಮನೆಗೆ ತಲುಪಬೇಕಿದೆ ನಾರಾಯಣ ಗುರು ತತ್ವ

ರಂಗಯಾತ್ರೆಗೆ ಸಜ್ಜಾಗುತ್ತಿರುವ ‘ಶೂದ್ರ ಶಿವ’ , ಶೀರ್ಷಿಕೆ ಅನವಾರಣಗೊಳಿಸಿದ ಜನಾರ್ದನ ಪೂಜಾರಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 7:32 IST
Last Updated 7 ನವೆಂಬರ್ 2022, 7:32 IST
ಮಂಗಳೂರು ‘ರುದ್ರ ಥೇಟರ್‌’ನ ರಂಗ ಪ್ರಯೋಗದ ‘ಶೂದ್ರ ಶಿವ’ ಶೀರ್ಷಿಕೆಯನ್ನು ಜನಾರ್ದನ ಪೂಜಾರಿ ಅವರು ಕಾರ್ಯಕ್ರಮದಲ್ಲಿ ಭಾನುವಾರ ಅನಾವರಣ ಮಾಡಿದರು. ಆರ್‌.ಪದ್ಮರಾಜ್ ಆರ್, ರಂಗಕರ್ಮಿ ಜನಾರ್ದನ ಜೆನ್ನಿ, ಊರ್ಮಿಳಾ ರಮೇಶ್ ಹಾಗೂ ದೇವೇಂದ್ರ ಪೂಜಾರಿ ಇದ್ದಾರೆ
ಮಂಗಳೂರು ‘ರುದ್ರ ಥೇಟರ್‌’ನ ರಂಗ ಪ್ರಯೋಗದ ‘ಶೂದ್ರ ಶಿವ’ ಶೀರ್ಷಿಕೆಯನ್ನು ಜನಾರ್ದನ ಪೂಜಾರಿ ಅವರು ಕಾರ್ಯಕ್ರಮದಲ್ಲಿ ಭಾನುವಾರ ಅನಾವರಣ ಮಾಡಿದರು. ಆರ್‌.ಪದ್ಮರಾಜ್ ಆರ್, ರಂಗಕರ್ಮಿ ಜನಾರ್ದನ ಜೆನ್ನಿ, ಊರ್ಮಿಳಾ ರಮೇಶ್ ಹಾಗೂ ದೇವೇಂದ್ರ ಪೂಜಾರಿ ಇದ್ದಾರೆ   

ಮಂಗಳೂರು: ‘ಪ್ರಸ್ತುತ ಕಾಲಘಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವ, ಆದರ್ಶಗಳನ್ನು ಮನೆ-ಮನೆಗಳಿಗೆ ತಲುಪಿಸುವ ಅಗತ್ಯ ಇದೆ. ಗುರುಗಳ ಜೀವನ ಸಂದೇಶವನ್ನು ‘ಶೂದ್ರ ಶಿವ’ ರಂಗಪ್ರಯೋಗದ ಮೂಲಕ ಪ್ರಸಾರ ಮಾಡುವ ಪ್ರಯತ್ನ ಸಾರ್ಥಕವಾಗಲಿ’ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಹಾರೈಸಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶಗಳನ್ನೊಳಗೊಂಡ ‘ಶೂದ್ರ ಶಿವ’ ನಾಟಕವನ್ನುವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ರಂಗಕ್ಕೆ ತರಲಾಗುತ್ತಿದೆ. ಈ ರಂಗ ಪ್ರಯೋಗದ ಶೀರ್ಷಿಕೆಯನ್ನು ಕುದ್ರೋಳಿ ಕ್ಷೇತ್ರದಲ್ಲಿ ಅನಾವರಣಗೊಳಿಸಿ ಭಾನುವಾರ ಅವರು ಮಾತನಾಡಿದರು.

‘ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಸಂದೇಶಗಳನ್ನು ರಂಗಭೂಮಿಯಲ್ಲಿ ಅಳವಡಿಸುವ ಪ್ರಯತ್ನ ಶ್ಲಾಘನೀಯ. ಇದು ಸಹಸದ ಕೆಲಸವೂ ಹೌದು. ‘ಶೂದ್ರ ಶಿವ’ ನಾಟಕವು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ದಿಸೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿ. ಇದರ ಪ್ರದರ್ಶನ ಯಶಸ್ವಿಯಾಗಲಿ‌’ ಎಂದು ಅವರು ಶುಭಕೋರಿದರು.

ADVERTISEMENT

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಆರ್. ಪದ್ಮರಾಜ್ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರಿನ ರಂಗಕರ್ಮಿ ಎಚ್.ಜನಾರ್ದನ (ಜನ್ನಿ) ರಂಗ ತಾಲೀಮಿಗೆ ಚಾಲನೆ ನೀಡಿದರು. ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಉಪಸ್ಥಿತರಿದ್ದರು. ಮನೋಜ್ ವಾಮಂಜೂರು ಸ್ವಾಗತಿಸಿದರು.

ಆಶಕ್ತರಿಗೆ ಸೌದಿ ಅರೇಬಿಯಾದ ‘ಮಂಗಳೂರು ಅಸೋಸಿಯೇಶನ್’ ಹಾಗೂ ಕುದ್ರೋಳಿಯ ‘ಗುರು ಬೆಳದಿಂಗಳು’ ಸಹಯೋಗದಲ್ಲಿ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ವಿದ್ಯಾರ್ಥಿವೇತನ ವಿತರಿಸಲಾಯಿತು. ‘ಜರ್ನಿ ಥಿಯೇಟರ್ ಗ್ರೂಪ್’ನವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು.

ಈ ರಂಗ ಪ್ರಯೋಗಕ್ಕಾಗಿ 21 ಕಲಾವಿದರನ್ನು ರುದ್ರ ಥೇಟರ್‌ ಸಂದರ್ಶನ ಮೂಲಕ ಆಯ್ಕೆ ಮಾಡಿದೆ. ತಂಡದ ಸದಸ್ಯರು 40 ದಿನಗಳ ರಂಗ ತಾಲೀಮು ನಡೆಸಲಿದ್ದಾರೆ. ಬಳಿಕ ಎರಡು ತಿಂಗಳ ಕಾಲ ಈ ತಂಡ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಂಚಾರ ನಡೆಸಲಿದೆ. ಎರಡು ತಾಸುಗಳ ‘ಶೂದ್ರ ಶಿವ’ ನಾಟಕವನ್ನು ಪ್ರದರ್ಶಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.