ADVERTISEMENT

ನಾರಾಯಣ ಗುರು ಪಾಠ ಮರು ಸೇರ್ಪಡೆ: ಬಿಲ್ಲವರ ಯೂನಿಯನ್‌ ಸ್ವಾಗತ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 16:25 IST
Last Updated 13 ಜುಲೈ 2022, 16:25 IST
ನವೀನ್‌ಚಂದ್ರ ಡಿ.ಸುವರ್ಣ
ನವೀನ್‌ಚಂದ್ರ ಡಿ.ಸುವರ್ಣ   

ಮಂಗಳೂರು: 10ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಮತ್ತೆ ಸೇರ್ಪಡೆ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವುದನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಸ್ವಾಗತಿಸಿದೆ.

10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠವನ್ನು ಕೈಬಿಟ್ಟು ಕನ್ನಡ ಮಾಧ್ಯಮದ ಕನ್ನಡ ಭಾಷಾ ಪುಸ್ತಕದಲ್ಲಿ ಸೇರ್ಪಡೆ ಮಾಡಿದ ಸರ್ಕಾರ ಕ್ರಮವು ರಾಜ್ಯದ ‌ಬಿಲ್ಲವ, ಈಡಿಗ ಮತ್ತು ಈ ಸಮಾಜದ ಇತರ ಉಪ ಪಂಗಡಗಳಿಗೆ ಹಾಗೂ ಗುರುಗಳ ಅಸಂಖ್ಯಾತ ಅನುಯಾಯಿಗಳ ಭಾವನೆಗೆ ತೀವ್ರತರ ನೋವು ತಂದಿತ್ತು. ನಾರಾಯಣ ಗುರುಗಳ ಪಠ್ಯವನ್ನು ಹಿಂದಿನಂತೆಯೇ ಉಳಿಸಿಕೊಳ್ಳದಿದ್ದರೆ ಸಂಘಟಿತ ಹೋರಾಟ ನಡೆಸುವುದಾಗಿ ಯೂನಿಯನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಬಿಲ್ಲವ ಸಂಘಟನೆಗಳ ಪ್ರಮುಖರು ನಿರ್ಧರಿಸಿದ್ದರು. ವಿವಾದ ಇತ್ಯರ್ಥ ಪಡಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದರು.

‘ನಮ್ಮ ಬೇಡಿಕೆಗೆ ಸ್ಪಂದಿಸಿದ ಶಿಕ್ಷಣ ಸಚಿವರು, 10ನೆ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಮರು ಸೇರ್ಪಡೆಗೆ ಆದೇಶ ನೀಡಿರುವುದು ಗುರುಗಳ ಅನುಯಾಯಿಗಳಿಗೆ ಆನಂದ ತಂದಿದೆ. ಗುರುಗಳ ವಿಚಾರಧಾರೆ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವಂತಾಗಿದೆ. ಬಿಲ್ಲವ ಸಮಾಜದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ಮತ್ತು ಸಂಸದ ನಳಿನ್ ಕುಮಾರ್‌ ಕಟೀಲ್‌ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ’ ಎಂದು ಯೂನಿಯನ್‌ನ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.