ಕಾರ್ಯಕ್ರಮದಲ್ಲಿ ಪುತ್ತೂರಿನ ವಿದ್ಯಾರ್ಥಿ ವಿಶಾಲ್ ಅವರಿಗೆ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಮಾಡಲಾಯಿತು
– ಪ್ರಜಾವಾಣಿ ಚಿತ್ರ
ಮಂಗಳೂರು: ಸಮಾನ ಶಿಕ್ಷಣಕ್ಕೆ ಅಡ್ಡಗಾಲು ಹಾಕುವ ಪ್ರವೃತ್ತಿಯವರು ದೇಶದಲ್ಲಿ ಹಿಂದಿನಿಂದಲೇ ಇದ್ದರು. ಈಗಲೂ ಅಂಥ ಪಟ್ಟಭದ್ರ ಹಿತಾಸಕ್ತಿಗಳು ಇವೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳನ್ನು ಉಳಿಸಲು ಸರ್ಕಾರ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಲಹೆ ನೀಡಿದರು.
ನಗರದ ನಾರಾಯಣ ಗುರು ಯುವ ವೇದಿಕೆ ಭಾನುವಾರ ಆಯೋಜಿಸಿದ್ದ ವೇದಿಕೆಯ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಚೇತನ ತುಂಬಿದವರು ಬ್ರಿಟಿಷರು. ಲಾರ್ಡ್ ಮೆಕಾಲೆ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದಾಗ ದೇಶದ ಸಾಕ್ಷರತೆ ಪ್ರಮಾಣ ಶೇಕಡ 3 ಮಾತ್ರ ಇತ್ತು. ಕ್ರಮೇಣ ಅದು ಶೇಕಡ 11ಕ್ಕೆ ಏರಿತು. ಈಗ ಶೇಕಡ 76ಕ್ಕೆ ತಲುಪಿದೆ. ಆದರೂ ನಮ್ಮಲ್ಲಿ ಜ್ಞಾನವಂತರು ಮತ್ತು ಸುಶಿಕ್ಷಿತರ ಕೊರತೆ ಇದೆ’ಎಂದು ಅವರು ಹೇಳಿದರು.
‘ದೇಶದ ಮಹಿಳೆಯರಿಗೆ ಸರಿಯದ ಶಿಕ್ಷಣ ಸಿಗುತ್ತಿರಲಿಲ್ಲ. ಜ್ಯೋತಿಬಾ ಫುಲೆ ಅವರಂಥ ಸಮಾಜ ಸುಧಾರಕರು ಶಿಕ್ಷಣ ಕ್ರಾಂತಿಗೆ ಮುಂದಾದರು. ಅದಕ್ಕಾಗಿ ಅವರು ಕಿರುಕುಳವನ್ನೂ ಅನುಭವಿಸಿದರು. ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿದ್ದ ಶಿಕ್ಷಣ ಹೋರಾಟದಿಂದ ಎಲ್ಲರಿಗೂ ಸಿಗುವಂತಾಯಿತು’ ಎಂದು ಅವರು ಹೇಳಿದರು.
‘ಶಾಲೆ ಮತ್ತು ಶಿಕ್ಷಣ ಸಂಸ್ಥೆ ಮಾತ್ರ ಇದ್ದರೆ ಸಾಲದು. ಅವುಗಳನ್ನು ಉಳಿಸಲು ಸಮಾಜ ಸೇವಕರೂ ಇರಬೇಕು. ಸಮಾಜ ಸೇವೆ ಮಾಡಲು ಸಂಸದ ಅಥವಾ ಶಾಸಕ ಆಗಲೇಬೇಕೆಂದೇನೂ ಇಲ್ಲ. ಸೇವಾ ಮನೋಭಾವ ಇದ್ದರೆ ಸಾಕು. ಶಿಕ್ಷಣ ಮತ್ತುಸಾಕ್ಷರತೆಯಲ್ಲಿ ವ್ಯತ್ಯಾಸವಿದೆ. ಶಿಕ್ಷಿತರು ಪ್ರಪಂಚ ಜ್ಞಾನ ಹೊಂದಿರುತ್ತಾರೆ. ಸಮಾಜದ ನ್ಯೂನತೆಯನ್ನು ಅರಿತು ಸರಿಪಡಿಸಲು ಶಿಕ್ಷಣ ನೆರವಾಗಬೇಕು’ ಎಂದು ಅವರು ಸೂಚಿಸಿದರು.
‘ಶಿಕ್ಷಣದಿಂದ ಸ್ವತಂತ್ರರಾಗಿ ಎಂದು ನಾರಾಯಣ ಗುರು ಹೇಳಿದ್ದರು. ಹಿಂದುಳಿದ ವರ್ಗದವರಿಗೆ ಇನ್ನಷ್ಟು ಶಿಕ್ಷಣ ಸಿಗಬೇಕು. ಕ್ಯಾಪಿಟೇಷನ್ ಇಲ್ಲದ ಶಿಕ್ಷಣ ಸಂಸ್ಥೆಗಳು ಈಗ ಇಲ್ಲ. ಮಠದ ಸಂಸ್ಥೆಗಳಲ್ಲೂ ಉಚಿತ ಶಿಕ್ಷಣ ಸಿಗುತ್ತಿಲ್ಲ ಎಂಬುದು ಬೇಸರದ ವಿಷಯ. ಶಿಕ್ಷಣ ವ್ಯಾಪಾರವಾದರೆ ಮಕ್ಕಳೂ ವ್ಯಾಪಾರಿಗಳಾಗುತ್ತಾರೆ ಎಂಬ ಅರಿವು ಸಮಾಜದಲ್ಲಿ ಇರಬೇಕು’ ಎಂದು ಅವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ಮುಖಂಡ ಕೃಷ್ಣ ಜೆ.ಪಾಲೆಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಇನ್ ಸ್ಪೆಕ್ಟರ್ ಹರೀಶ್ ಪೂಜಾರಿ, ಪತ್ರಕರ್ತ ಲೀಲಾಕ್ಷ ಕರ್ಕೇರ, ಉದ್ಯಮಿಗಳಾದ ರತೀಂದ್ರ ಎಚ್. ಅತ್ತಾವರ, ಸಂದೇಶ ಪೂಜಾರಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಯೆನೆಪೋಯ ಹೋಮಿಯೋಪಥಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ವೇದಿಕೆಯ ಅಧ್ಯಕ್ಷ ಸುದರ್ಶನ್ ಕೋಟ್ಯಾನ್, ಸಂಚಾಲಕ ಸುಧಾಕರ ಕರ್ಕೇರ ಇದ್ದರು. ನೀಲಯ ಎನ್.ಅಗರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಪ್ರಾಚಾರ್ಯೆ, ಸಮಾಜ ಸೇವಕಿ ಶಶಿಲೇಖಾ ಅವರನ್ನು ಗೌರವಿಸಲಾಯಿತು. ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಮತ್ತು ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ವಿಜ್ಞಾನ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾಲಕ ಪ್ರಣವ್ ಪೂಜಾರಿ ಮತ್ತು ಕೃಷಿ ತೋಟ ಮಾಡಿಕೊಂಡಿರುವ ಶಾಲಾ ವಿದ್ಯಾರ್ಥಿ ಸೌರವ್ ಎಸ್.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮುಖಂಡ ವಿನಯಕುಮಾರ್ ಸೊರಕೆ, ಉದ್ಯಮಿ ಉರ್ಮಿಳಾ ರಮೇಶ್, ಉಪನ್ಯಾಸಕ ಶೇಷಪ್ಪ ಅಮೀನ್, ದಿಶಾ ಸುವರ್ಣ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.