ADVERTISEMENT

ಹೆದ್ದಾರಿ ಸರಣಿ ಅಪಘಾತ ತಡೆಗೆ ಕ್ರಮ

ಮೂಲ್ಕಿ: ಸಂಚಾರ ಪೊಲೀಸ್‌, ಹೆದ್ದಾರಿ ಇಲಾಖೆ ಅಧಿಕಾರಿಗಳು, ರಸ್ತೆ ಸುರಕ್ಷತಾ ಸಮಿತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 13:38 IST
Last Updated 19 ಡಿಸೆಂಬರ್ 2018, 13:38 IST
ಮೂಲ್ಕಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಸಂಚಾರ ಪೊಲೀಸರು ಬ್ಯಾರೀಕೇಡ್‌ಗಳನ್ನು ಆಳವಡಿಸಿದರು.
ಮೂಲ್ಕಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಸಂಚಾರ ಪೊಲೀಸರು ಬ್ಯಾರೀಕೇಡ್‌ಗಳನ್ನು ಆಳವಡಿಸಿದರು.   

ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ದಿನಗಳಿಂದ ಸರಣಿ ಅಪಘಾತ ಸಂಭವಿಸಿ ಪ್ರಾಣಹಾನಿ ಉಂಟಾಗುತ್ತಿರುವ ಕಾರಣ ಬುಧವಾರ ಮೂಲ್ಕಿ ಮುಖ್ಯ ಪೇಟೆಯಲ್ಲಿ ಸಂಚಾರ ಪೊಲೀಸರು ಹೆದ್ದಾರಿ ಇಲಾಖಾಧಿಕಾರಿಗಳು ಮತ್ತು ಮೂಲ್ಕಿ ರಸ್ತೆ ಸುರಕ್ಷತಾ ಸಮಿತಿಯ ಜತೆಗೂಡಿ ಹೆದ್ದಾರಿ ಸಂಚಾರದಲ್ಲಿ ವೇಗಮಿತಿ ಸೇರಿದಂತೆ ಹಲವು ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.

ಸಂಚಾರಿ ಪೊಲೀಸ್ ಸಹಾಯಕ ಆಯುಕ್ತ ಎಮ್.ಮಂಜುನಾಥ್ ಶೆಟ್ಟಿ ನೇತೃತ್ವದಲ್ಲಿ ಮೂಲ್ಕಿ ಆದಿಧನ್ ಹೋಟೆಲ್ ಮುಂಭಾಗದ ರಸ್ತೆ ವಿಭಾಜಕ ಬಳಿ ರಸ್ತೆಯ ಪೂರ್ವ ಬದಿಯಲ್ಲಿ ಹಳೆಯಂಗಡಿ ಮತ್ತು ಮುಕ್ಕ ಮಾದರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಲಾಯಿತು. ಪಶ್ಚಿಮ ಬದಿಯ ಬಸ್‌ನಿಲ್ದಾಣ ಮತ್ತು ಮೂಲ್ಕಿ ನರ್ಸಿಂಗ್ ಹೋಮ್ ಎದುರಿನಲ್ಲಿಯೂ ಬ್ಯಾರಿಕೇಡ್ ಅಳವಡಿಸಲಾಯಿತು.

ಪೂರ್ವ ಬದಿಯಿಂದ ಆದಿಧನ್ ಹೋಟೆಲ್ ಬಳಿಯಿಂದ ಪಶ್ಚಿಮ ಬದಿಯ ಹೆದ್ದಾರಿಗೆ ಸಂಚಾರ ನಿಷೇಧಿಸಿ ವಿಜಯಾ ಸನ್ನಿಧಿವರೆಗೆ ತೆರಳಿ ಅಲ್ಲಿ ತಿರುವು ಪಡೆಯಲು ನಿರ್ಧರಿಸಲಾಯಿತು. ಆದಿಧನ್ ಎದುರಿನ ವಿಭಾಜಕ ಮುಚ್ಚಿ, ಆರ್.ಆರ್. ಟವರ್ ಬಳಿ ವಿಭಾಜಕ ನಿರ್ಮಿಸಲು ಉದ್ದೇಶಿಸಲಾಗಿತ್ತಾದರೂ ಅಲ್ಲಿಯೂ ಸಮಸ್ಯೆಯಿರುವುದನ್ನು ಮನಗಂಡ ಎನ್ಎಚ್ಎ ರೆಸಿಡೆಂಟ್ ಎಂಜಿನಿಯರ್ ರಾಮಚಂದ್ರನ್ ಈ ಬಗ್ಗೆ ತಾಂತ್ರಿಕ ತೊಂದರೆಗಳಿರುವುದನ್ನು ತಿಳಿಸಿದರು. ಪಶ್ಚಿಮ ಬದಿಯ ಸವರ್ಿಸ್ ರಸ್ತೆ ಕಾಮಗಾರಿ ನಡೆದಲ್ಲಿ ಆದಿಧನ್ ಬಳಿಯ ವಿಭಾಜಕ ತೆರವುಗೊಳಿಸಿ ಆರ್‌ಆರ್ ಟವರ್ ಬಳಿ ವಿಭಜಕ ನಿರ್ಮಿಸಲಾಗುವುದು ಎಂದವರು ಹೇಳಿದರು.

ADVERTISEMENT

ರಸ್ತೆ ಸುರಕ್ಷತೆ ಬಗ್ಗೆ ಹೆದ್ದಾರಿ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎನ್ಎಚ್ಎಗೆ ಮನವಿಯೊಂದನ್ನು ಸಲ್ಲಿಸುವಂತೆ ಅವರು ಕೇಳಿಕೊಂಡಿದ್ದು, ಅದನ್ನು ಆದ್ಯತೆ ಮೇರೆಗೆ ಗುತ್ತಿಗೆದಾರ ಕಂಪನಿ ನವಯುಗ್ಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಸಮಸ್ಯೆಗಳ ಬಗ್ಗೆ ನವಯುಗ್ ಪ್ರಾಜೆಕ್ಟ್ ಮ್ಯಾನೇಜರ್ ಶಂಕರ್ ಗಮನಕ್ಕೆ ತಂದು, ನಿಯೋಗ ಮೂಲ್ಕಿಗೆ ಭೇಟಿ ನೀಡಲಿದೆ’ ಎಂದು ನವಯುಗ್ ಕಂಪನಿಯ ಚಂದ್ರಶೇಖರ್ ಹೇಳಿದರು. ನವಯುಗ ಕಂಪನಿ ವಾರದೊಳಗೆ ನೀಡುವ ಬ್ಯಾರಿಕೇಡ್‌ಗಳಿಗೆ ಬಿಳಿ ಬಣ್ಣ ಬಳಿಯುವಂತೆ ಸಂಚಾರ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಕೇಳಿಕೊಂಡರು. ಸುರಕ್ಷಿತ ಸಂಚಾರ ದೃಷ್ಟಿಯಿಂದ ಬಪ್ಪನಾಡು ಬಳಿಯೂ ಹೆದ್ದಾರಿಯ ಎರಡೂ ಕಡೆ ಹೆಚ್ಚುವರಿಯಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ, ಉದ್ಯಮಿ ಹರೀಶ್ ಎನ್.ಪುತ್ರನ್, ಮಧು ಆಚಾರ್ಯ, ಧನಂಜಯ ಮಟ್ಟು, ಸದಾಶಿವ ಹೊಸದುರ್ಗ, ಅಬ್ದುಲ್ ರಜಾಕ್, ಉದಯ ಶೆಟ್ಟಿ ಆದಿಧನ್, ರಮಾನಾಥ ಪೈ, ಸತೀಶ್ ಅಂಚನ್, ಕಮಲಾಕ್ಷ ಬಡಗುಹಿತ್ಲು, ಕಿಶೋರ್ ಶೆಟ್ಟಿ, ಉಮೇಶ್ ಮಾನಂಪಾಡಿ, ಪ್ರವೀಣ್ ಕಾಮತ್, ಮೋಹನ್ ಕುಬೆವೂರು, ಎನ್ಎಚ್ಎ ಎಂಜಿನಿಯರ್ ರವಿ, ಟೋಲ್ ಕೇಂದ್ರದ ಮ್ಯಾನೇಜರ್ ಶಿವಪ್ರಸಾದ್, ನವಯುಗ್ ಕಂಪನಿಯ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.