ಬೆಳ್ತಂಗಡಿ: ‘ಗುಂಪು ಘರ್ಷಣೆ, ಅಧಿಕಾರಿಗಳ ಮೇಲೆ ಹಲ್ಲೆ, ಕೋಮು ಪ್ರಚೋದನಕಾರಿ ಭಾಷಣ ಸೇರಿದಂತೆ ಶಾಸಕ ಹರೀಶ್ ಪೂಂಜ ಮೇಲೆ 9 ಪ್ರಕರಣಗಳಿವೆ. ಕೋಮು ದ್ವೇಷದ ಮೂಲಕ ಶಾಂತಿ ಕದಡುವ ಅವರ ಮೇಲಿನ ಪ್ರಕರಣಗಳು ಗಂಭೀರವಾಗಿದ್ದು, ರೌಡಿಶೀಟರ್ ಎಂದು ಪರಿಗಣಿಸಿ ಜಿಲ್ಲೆಯಿಂದ ಗಡೀಪಾರು ಮಾಡಿಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶಾಸಕ ಹರೀಶ್ ಪೂಂಜ ಜಿಲ್ಲೆಯ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆ. ಸಾವಿನ ಮನೆಗೆ ಹೋಗಿ ರಾಜಕೀಯ ಮಾಡುತ್ತಿದ್ದಾರೆ. ಫರಂಗಿಪೇಟೆಯಲ್ಲಿ ಬಾಲಕ ನಾಪತ್ತೆಯಾದಾಗ, ತೆಕ್ಕಾರು ದೇವಸ್ಥಾನದ ಧಾರ್ಮಿಕ ವೇದಿಕೆಯಲ್ಲಿ ದ್ವೇಷ ಭಾಷಣದ ಮೂಲಕ ಸಮಾಜವನ್ನು ಒಡೆಯುತ್ತಿದ್ದಾರೆ’ ಎಂದರು.
‘ತೆಕ್ಕಾರಿನ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ವಾಹನ ನಿಲುಗಡೆ, ರಸ್ತೆ, ವೇದಿಕೆಗೆ ಅಲ್ಲಿನ ಮುಸ್ಲಿಮರು ಜಾಗ ನೀಡಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿಯವರು ಮುಸ್ಲಿಮರ ಮನೆಗೆ ಹೋಗಿ ಆಮಂತ್ರಣ ನೀಡಿದ್ದರಿಂದ, ದೇವಸ್ಥಾನದ ಕೆಲಸಗಳಲ್ಲಿ ಒಟ್ಟಾಗಿ ಇದ್ದುದರಿಂದ ಅವರು ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿದ್ದರು. ಸಾಮರಸ್ಯಕ್ಕೆ ಹೆಸರಾಗಿದ್ದ ಆ ಊರಿನಲ್ಲಿ ಮನೆಗೆ ಬಂದ ಅತಿಥಿಗಳ ಬಗ್ಗೆ ಕೋಮು ಪ್ರಚೋದಿತ ಮಾತು ಆಡಿರುವುದು ದುರಂತ’ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವರ ಕುಟುಂಬವನ್ನು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಅವಹೇಳನ ಮಾಡಿರುವುದು ಸರಿಯಲ್ಲ. ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಅಭಿವೃದ್ಧಿಯಾದರೆ ಶಾಸಕರ ದ್ವೇಷ ಕಾರುವ ಚಾಳಿಯಿಂದಾಗಿ ಬೆಳ್ತಂಗಡಿಯ ಅಭಿವೃದ್ದಿ ಕುಂಠಿತವಾಗಿದೆ. ತಾಲ್ಲೂಕಿನಲ್ಲಿ ಶಾಂತಿ ಕದಡಿ ಯುವ ಮನಸ್ಸನ್ನು ಪ್ರಚೋದಿಸಿ ಅಸ್ತಿತ್ವ ಉಳಿಸುವ ಕಾರ್ಯ ಮಾಡಬಹುದು ಎಂದುಕೊಂಡಿರುವ ಅವರಿಗೆ ತಾಲ್ಲೂಕಿನ ಜನತೆ ಅವಕಾಶ ನೀಡುವುದಿಲ್ಲ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಸತೀಶ್ ಕಾಶಿಪಟ್ಣ, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಪ್ರಮುಖರಾದ ಶೇಖರ ಕುಕ್ಕೇಡಿ, ಸಂತೋಷ್ ಕುಮಾರ್, ಸೆಬಾಸ್ಟಿಯನ್, ಹನೀಫ್, ಹಕೀಂ ಕೊಕ್ಕಡ, ಅಜರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.