ADVERTISEMENT

ರಸ್ತೆ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರ ನಿರ್ಲಕ್ಷ್ಯ- ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 7:58 IST
Last Updated 7 ಮಾರ್ಚ್ 2023, 7:58 IST
ಲಕ್ಷ್ಮಣ ನಾಯ್ಕ
ಲಕ್ಷ್ಮಣ ನಾಯ್ಕ   

ಪುತ್ತೂರು: ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಬೆಂಗಾವಲು ಪೊಲೀಸ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ (50) ಅವರನ್ನು ಆಸ್ಪತ್ರೆಗೆ ಸೇರಿಸಲು ಪೊಲೀಸರು ಸಹಕರಿಸಲಿಲ್ಲ ಎಂದು ಶಾಸಕರಿಗೆ ದೂರು ನೀಡಲಾಗಿದೆ.

ಭಾನುವಾರ ರಾತ್ರಿ ಸಂಪ್ಯ ಪೊಲೀಸ್ ಠಾಣೆಗೆ ಸಮೀಪದ ಸಂಪ್ಯ ಮಸೀದಿ ಎದುರು ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಲಕ್ಷ್ಮಣ ನಾಯ್ಕ್ ಅವರನ್ನು ತಮ್ಮ ವಾಹನದಲ್ಲಿ ಕರೆದೊಯ್ಯಲು ಪೊಲೀಸರು ಮುಂದೆ ಬರಲಿಲ್ಲ. ಬಳಿಕ ಸ್ಥಳೀಯರು ಗಾಯಾಳುವನ್ನು ಆಟೊ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತರಬೇಕಾಯಿತು ಎಂದು ಅವರನ್ನು ಆಸ್ಪತ್ರೆಗೆ ಕತೆತಂದವರು ದೂರಿದ್ದಾರೆ. ಪೊಲೀಸರ ನಿರ್ಲಕ್ಷ್ಯದ ಕುರಿತು ಆಸ್ಪತ್ರೆಗೆ ಬಂದ ಶಾಸಕ ಸಂಜೀವ ಮಠಂದೂರು ಅವರಲ್ಲಿ ದೂರು ನೀಡಿ, ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸುಳ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಜಿಲ್ಲೆಯ ಡಿಆರ್‌ಗೆ ಸೇರಿದ ಎನ್ಐಎ ಬೆಂಗಾವಲು ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಲಕ್ಷ್ಮಣ ನಾಯ್ಕತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿತ್ತು. ಅದೇ ರಸ್ತೆಯಾಗಿ ಹೋಗುತ್ತಿದ್ದ ರಮೇಶ್ ರೈ ಗಾಯಾಳುವನ್ನು ಸ್ಥಳೀಯರ ಸಹಕಾರದೊಂದಿಗೆ ಆಟೊ ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕರೆಕೊಂಡು ಹೋಗಿದ್ದರು. ಆದರೆ, ಆ ವೇಳೆಗಾಗಲೇ ಲಕ್ಷ್ಮಣ ನಾಯ್ಕ ಮೃತಪಟ್ಟಿದ್ದರು.

ADVERTISEMENT

ಸೋಮವಾರ ಪಾಣಾಜೆಯ ಸಹಕಾರಿ ಸಂಘದ ವಠಾರಕ್ಕೆ ಮೃತದೇಹ ವನ್ನು ಕೊಂಡೊಯ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಪಾಣಾಜೆ ಗ್ರಾಮದ ಕೋಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಲಕ್ಷ್ಮಣ್ ನಾಯ್ಕ್ ಅವರಿಗೆ ತಾಯಿ ಸರಸ್ವತಿ, ಪಾಣಾಜೆ ವಿವೇಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಅನುರಾಧಾ, ಇಬ್ಬರು ಪುತ್ರಿಯರು, ಸಹೋದರ ಮತ್ತು ಇಬ್ಬರು ಸಹೋದರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.