ADVERTISEMENT

ಯುವಜನರ ಸಹಕಾರದಿಂದ ರಕ್ತ ಸಂಗ್ರಹ ಸಾಧ್ಯ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.

ನೆಹರೂ ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಡಿಸಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 15:54 IST
Last Updated 30 ಮಾರ್ಚ್ 2022, 15:54 IST
ಜಲ ಸಂರಕ್ಷಣೆ ಕುರಿತ ಜಾಗೃತಿ ಪತ್ರವನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಬಿಡುಗಡೆಗೊಳಿಸಿದರು.
ಜಲ ಸಂರಕ್ಷಣೆ ಕುರಿತ ಜಾಗೃತಿ ಪತ್ರವನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಬಿಡುಗಡೆಗೊಳಿಸಿದರು.   

ಮಂಗಳೂರು: ಕೌಶಲ ಶಿಬಿರದಂತೆ ರಕ್ತದಾನ ಶಿಬಿರಗಳಲ್ಲಿಯೂ ಯುವ ಜನರು ಹೆಚ್ಚು ಭಾಗವಹಿಸುವಂತೆ ಅಗತ್ಯ ಸಲಹೆ ಹಾಗೂ ಸಹಕಾರ ನೀಡಬೇಕು. ಆ ಮೂಲಕ ಜಿಲ್ಲೆಯಲ್ಲಿ ರಕ್ತದ ಸಂಗ್ರಹ ಅಗತ್ಯ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿ ನಡೆದ ಕೇಂದ್ರ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರದ ಜಿಲ್ಲಾ ಸಲಹಾ ಸಮಿತಿಯ 2021- 2022ನೇ ಸಾಲಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೆಹರೂ ಯುವ ಕೇಂದ್ರದ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ, ಆರೋಗ್ಯ, ಕೌಶಲ ಅಭಿವೃದ್ಧಿ, ಉದ್ಯೋಗ ಮತ್ತು ಪರಿಸರ ಸಂರಕ್ಷಣೆ ಹಾಗೂ ಯುವಜನರಿಗೆ ಉದ್ಯೋಗದ ಬಗ್ಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ADVERTISEMENT

ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿರುವುದರಿಂದ ಈ ಸಮಯದಲ್ಲಿ ಯುವಕರನ್ನು ಬಳಸಿಕೊಂಡು ಕಡಲತೀರ, ನಗರ ಸ್ವಚ್ಛತೆ, ಶ್ರಮದಾನ ಕೆಲಸಗಳನ್ನು ಮಾಡುವಂತೆ ಮನವೊಲಿಸಬೇಕು. ಯುವಕರೇ ಹೆಚ್ಚಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವುದರಿಂದ ಅವರಿಗೆ ಅದರಿಂದಾಗುವ ದುಷ್ಪರಿಣಾಮ, ಸೈಬರ್ ಕ್ರೈಂ, ಹನಿ ಟ್ರ್ಯಾಪ್ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿ, ಬ್ಯಾಂಕಿಂಗ್ ಮಿತ್ರದಂತಹ ಜನೋಪಯೋಗಿ ಆ್ಯಪ್‍ಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಲೀಡ್ ಬ್ಯಾಂಕ್ ಮಾನ್ಯೇಜರ್ ಪ್ರವೀಣ್ ಡಿಜಿಟಲ್ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಕೇಂದ್ರದ ಕಾರ್ಯ ಚಟುವಟಿಕೆಗಳ ವರದಿ ಸಲ್ಲಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಮಂಗಳೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜಕಿ ಡಾ. ನಾಗರತ್ನಾ ಕೆ., ಎನ್.ಸಿ.ಸಿ ಅಧಿಕಾರಿ ವಿಠ್ಠಲ್, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಸರೋಜಿನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ನರೇಂದ್ರ ಬಾಬು, ಯುವ ರೆಡ್‌ಕ್ರಾಸ್ ಕಾರ್ಯದರ್ಶಿ ಕುಸುಮತಾರ ಬಿ.ಕೆ., ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಎಸ್.ಜೆ. ಹೇಮಚಂದ್ರ, ಪರಿಸರವಾದಿ ಜೀತ್ ಮಿಲನ್ ರೋಚ್, ನೆಹರೂ ಯುವ ಕೇಂದ್ರದ ಜಗದೀಶ್ ಕೆ.ಎ.ಎ, ಪ್ರೀತೇಶ್, ಸುಶ್ಮಿತಾ ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.