ADVERTISEMENT

ಸುರತ್ಕಲ್‌ ಟೋಲ್‌ ಸಂಗ್ರಹ ಮತ್ತೆ ವಿಸ್ತರಣೆ?

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 16:04 IST
Last Updated 8 ಆಗಸ್ಟ್ 2022, 16:04 IST
ಸುರತ್ಕಲ್‌ ಟೋಲ್‌ ಪ್ಲಾಜಾ –ಪ್ರಜಾವಾಣಿ ಚಿತ್ರ
ಸುರತ್ಕಲ್‌ ಟೋಲ್‌ ಪ್ಲಾಜಾ –ಪ್ರಜಾವಾಣಿ ಚಿತ್ರ   

ಮಂಗಳೂರು: 'ಜನರು ಎಷ್ಟೇ ವಿರೋಧಿಸಿದರೂ ಸುರತ್ಕಲ್‌ ಟೊಲ್‌ ಪ್ಲಾಜಾದಲ್ಲಿ ವಾಹನಗಳಿಂದ ಅಕ್ರಮವಾಗಿ ಸುಂಕ ಸಂಗ್ರಹಿಸುವ ಗುತ್ತಿಗೆಯನ್ನು ಮತ್ತೆ ಒಂದು ವರ್ಷದವರೆಗೆ ನವೀಕರಿಸಲಾಗಿದೆ' ಎಂದು ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ದೂರಿದೆ. ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳು ಖಚಿತಪಡಿಸಿಯೂ ಇಲ್ಲ. ಅಲ್ಲಗಳೆದೂ ಇಲ್ಲ.

‘ಸುರತ್ಕಲ್‌ ಟೋಲ್‌ ಪ್ಲಾಜಾದಲ್ಲಿ ವಾಹನಗಳಿಂದ ಸುಂಕ ಸಂಗ್ರಹಿಸುವ ಗುತ್ತಿಗೆ ನವೀಕರಣಗೊಂಡ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನನಗೆ ತಲುಪಿಲ್ಲ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಕೊಡುಗೆಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸುರತ್ಕಲ್‌ನ ಅಕ್ರಮ ಟೋಲ್ ಪ್ಲಾಜಾ ರದ್ದುಪಡಿಸುವ ಘೋಷಣೆ ಮಾಡುತ್ತಾರೆ. ತನ್ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ದ ಎದ್ದಿರುವ ಜನಾಕ್ರೋಶವನ್ನು ತಣಿಸುವ ಪ್ರಯತ್ನ ನಡೆಸುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಸಾರ್ವಜನಿಕರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಸುರತ್ಕಲ್ ಟೋಲ್‌ ಪ್ಲಾಜಾದಲ್ಲಿ ವಾಹನಗಳಿಂದ ಸುಂಕ ಸಂಗ್ರಹಿಸುವ ಗುತ್ತಿಗೆಯನ್ನು ಮತ್ತೆ ಒಂದು ವರ್ಷ ಮುಂದುವರಿಸಲಾಗಿದೆ’ ಎಂದು ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ADVERTISEMENT

‘ಸುಂಕ ಸಂಗ್ರಹ ಗುತ್ತಿಗೆ ನವೀಕರಣ ಪ್ರಕ್ರಿಯೆ ಸೋಮವಾರ ನಡೆದಿದೆ. ಈ ಹಿಂದಿನ ಗುತ್ತಿಗೆದಾರರಿಗೆ ನಿತ್ಯ ₹ 13 ಲಕ್ಷ ಸುಂಕ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಇದನ್ನು ₹ 12 ಲಕ್ಷಕ್ಕೆ ಇಳಿಸಲಾಗಿದೆ. ಆ ಮೂಲಕ ಗುತ್ತಿಗೆದಾರರ ಹಾಗೂ ಅವರಿಂದ ಕಮೀಷನ್ ಪಡೆಯುವವರ ಜೇಬು ಮತ್ತಷ್ಟು ದಪ್ಪ ಆಗಲಿದೆ’ ಎಂದು ಅವರು ಆರೋಪಿಸಿದ್ದಾರೆ.

ಬಿ.ಸಿ.ರೋಡ್‌–ಪಡೀಲ್‌–ಸುರತ್ಕಲ್‌ವರೆಗಿನ ಹೆದ್ದಾರಿಯನ್ನು ನವಮಂಗಳೂರು ಬಂದರು ಸಂಪರ್ಕ ಯೋಜನೆಯಡಿ ₹ 181.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಸುರತ್ಕಲ್‌ ಟೋಲ್‌ ಪ್ಲಾಜಾದಲ್ಲಿ 2015ರ ಡಿಸೆಂಬರ್‌ನಿಂದ ಸುಂಕ ಸಂಗ್ರಹಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ 60 ಕಿ.ಮೀ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳು ಇರುವಂತಿಲ್ಲ. ಇದ್ದರೆ, ಅವುಗಳನ್ನು ಮೂರು ತಿಂಗಳುಗಳ ಒಳಗೆ ತೆರವುಗೊಳಿಸುವುದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಸಂಸತ್ತಿನಲ್ಲಿ ಮಾ.23ರಂದು ಭರವಸೆ ನೀಡಿದ್ದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿಯ ಟೋಲ್‌ ಪ್ಲಾಜಾ ಹಾಗೂ ಸುರತ್ಕಲ್‌ ಟೋಲ್‌ ಪ್ಲಾಜಾಗಳ ನಡುವೆ 30 ಕಿ.ಮೀ ಅಂತರವೂ ಇಲ್ಲ. ಆದರೂ ಸುರತ್ಕಲ್‌ ಟೋಲ್‌ ಪ್ಲಾಜಾ ಇನ್ನೂ ತೆರವಾಗಿಲ್ಲ.

ಸುರತ್ಕಲ್‌ ಹಾಗೂ ತಲಪಾಡಿಯ ಟೋಲ್ ಪ್ಲಾಜಾಗಳನ್ನು ವಿಲೀನಗೊಳಿಸಲಾಗುತ್ತದೆ. ಭಾರಿ ವಾಹನಗಳಿಂದ ಸುಂಕ ಸಂಗ್ರಹಿಸಲು ನವಮಂಗಳೂರು ಬಂದರು ಪ್ರಾಧಿಕಾರದ ಕಚೇರಿ ಬಳಿ ಪ್ರತ್ಯೇಕ ಪ್ಲಾಜಾ ನಿರ್ಮಿಸಲಾಗುತ್ತದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದರು. ಆದರೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

----

ಸುರತ್ಕಲ್‌ ಟೋಲ್‌ ಪ್ಲಾಜಾ ರದ್ದತಿ ಬಗ್ಗೆ ಎನ್‌ಎಂಪಿಎ ಅಧಿಕಾರಿಗಳು ಹಾಗೂ ಕೇಂದ್ರ ಬಂದರು ಸಚಿವರ ಜೊತೆ ಚರ್ಚಿಸಿದ್ದೇನೆ. 28 ದಿನಗಳ ಒಳಗೆ ಈ ಕುರಿತು ಆದೇಶವಾಗಲಿದೆ

ನಳಿನ್‌ ಕುಮಾರ್‌ ಕಟೀಲ್‌, ಸಂಸದ, ದಕ್ಷಿಣ ಕನ್ನಡ

--

ಸುರತ್ಕಲ್‌ ಟೋಲ್‌ ಸಂಗ್ರಹ ಗುತ್ತಿಗೆಯನ್ನು ಜನ ವಿರೋಧ ಲೆಕ್ಕಿಸದೇ ಮತ್ತೆ ನವೀಕರಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಅವರನ್ನು ನಂಬಿದರೆ ಇದೇ ಗತಿ. ಜನ ಸುಮ್ಮನಿದ್ದರೆ ಟೋಲ್ ಲೂಟಿ ನಿಲ್ಲದು.

ಮುನೀರ್ ಕಾಟಿಪಳ್ಳ ಅಧ್ಯಕ್ಷ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.