ADVERTISEMENT

ಶಿರಾಡಿ ಘಾಟಿ ಬಂದ್‌: ಬೆಂಗಳೂರು–ಮಂಗಳೂರು ರಾತ್ರಿ ಸಂಪರ್ಕಕ್ಕೆ ಒಂದೇ ಮಾರ್ಗ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 6:33 IST
Last Updated 19 ಜುಲೈ 2024, 6:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯದ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ  ಶಿರಾಡಿ ಘಾಟಿಯಲ್ಲಿ ಇದೇ 18ರಿಂದ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಹಾಗೂ ಸಂಪಾಜೆ ಘಾಟಿಯಲ್ಲಿ ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಬೆಂಗಳೂರು ಸಂಪರ್ಕಕ್ಕೆ ದಕ್ಷಿಣ  ಕನ್ನಡ ಜಿಲ್ಲೆಯವರು ರಾತ್ರಿ ವೇಳೆ ಕೇವಲ ಚಾರ್ಮಾಡಿ ಘಾಟಿಯೊಂದನ್ನು ಮಾತ್ರ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತದಿಂದ ಹಾನಿಗೊಂಡ ಹೆದ್ದಾರಿಯ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಎಲ್ಲ ರೀತಿಯ ವಾಹನಗಳ (ತುರ್ತಿ ಸೇವೆಯವು ಹೊರತಾಗಿ) ಸಂಚಾರಕ್ಕೆ ನಿರ್ಬಂಧವಿದ್ದರೆ, ಸಂಪಾಜೆ ಮಾರ್ಗದಲ್ಲಿ ಇದೇ 22ರ ವರೆಗೆ ರಾತ್ರಿ 8ರಿಂದ ಬೆಳಿಗ್ಗೆ 6ರ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧವಿದೆ. 

ADVERTISEMENT

ಜಿಲ್ಲೆಯಿಂದ ಬೆಂಗಳೂರಿಗೆ ತೆರಳುವ ಹಾಗೂ ಅಲ್ಲಿಂದ ಜಿಲ್ಲೆಗೆ ಬರುವ ಬಹುತೇಕ ವಾಹನಗಳು ಶಿರಾಡಿ ಘಾಟಿ ಮೂಲಕವೇ ಸಾಗುತ್ತಿದ್ದವು. ಕೆಎಸ್‌ಆರ್‌ಟಿಸಿಯ ವಿವಿಧ ವಿಭಾಗಗಳ 150ಕ್ಕೂ ಹೆಚ್ಚು ಬಸ್‌ಗಳು ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳು ಶಿರಾಡಿ ಮೂಲಕ ಸಂಚರಿಸುತ್ತಿದ್ದವು.  ಈ ಘಾಟಿಯಲ್ಲಿ ಸಂಚಾರ ನಿರ್ಬಂಧದಿಂದ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಒತ್ತಡ ಹೆಚ್ಚಾಗಿ ಸಂಚಾರ ದಟ್ಟಣೆ ಉಂಟಾಗುವ ಅಪಾಯವಿದೆ.

‘ಚಾರ್ಮಾಡಿ ಘಾಟಿಯ ರಸ್ತೆ ಅಗಲ ಕಿರಿದಾಗಿರುವುದರಿಂದ ಹಾಗೂ ಕಡಿದಾದ ತಿರುವುಗಳಿಂದ ಕೂಡಿರುವುದರಿಂದ ಕೆಎಸ್‌ಆರ್‌ಟಿಸಿಯ ವೋಲ್ವೊ ಹಾಗೂ ಎ.ಸಿ ಸ್ಲೀಪರ್‌ ಬಸ್‌ಗಳು ಆ ಘಾಟಿಯಲ್ಲಿ ಸಂಚರಿಸುವುದು ಕಷ್ಟ. ಬೆಂಗಳೂರಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ನಿತ್ಯ ಇಂತಹ 30 ಬಸ್‌ಗಳು ಸೇವೆ ಒದಗಿಸುತ್ತಿವೆ. ಅಲ್ಲಿಂದಲೂ ಅಷ್ಟೇ ಸಂಖ್ಯೆಯ ಬಸ್‌ಗಳು ಜಿಲ್ಲೆಗೆ ಬರುತ್ತವೆ. ಹಾಗಾಗಿ ಕನಿಷ್ಠಪಕ್ಷ ವೋಲ್ವೊ ಹಾಗೂ ಎ.ಸಿ ಸ್ಲೀಪರ್ ಬಸ್‌ಗಳ ಸಂಚಾರಕ್ಕಾದರೂ ಶಿರಾಡಿಯಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡುತ್ತೇವೆ’ ಎಂದು ನಿಗಮದ ಮಂಗಳೂರು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಅನೇಕರು ಟಿಕೆಟ್‌ ಮುಂಗಡ ಕಾಯ್ದಿರಿಸಿರುವುದರಿಂದ ದಿಢೀರ್‌ ಬಸ್ ಸಂಚಾರ ರದ್ದು ಪಡಿಸಲು ಸಾಧ್ಯವಿಲ್ಲ. ಹಾಗಾಗಿ ಸದ್ಯ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಶಿರಾಡಿ ಘಾಟಿಯಲ್ಲಿ ಅವಕಾಶ ನೀಡಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಒಂದು ವೇಳೆ ಎ.ಸಿ. ಸ್ಲೀಪರ್‌ ಮತ್ತು ವೋಲ್ವೊ ಬಸ್‌ಗಳ ಸಂಚಾರಕ್ಕೆ ಶುಕ್ರವಾರದಿಂದ ಅವಕಾಶ ಸಿಗದಿದ್ದರೆ, ಈ ಬಸ್‌ಗಳ ಸೇವೆಗೆ ಅಡಚಣೆ ಉಂಟಾಗಲಿದೆ’ ಎಂದರು.

‘ಭಾರಿ ಮಳೆಯಾದಾಗಲೆಲ್ಲಾ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವುದು ಮಾಮೂಲಿ. ಧರ್ಮಸ್ಥಳಕ್ಕೆ ಬರುವ ಅನೇಕ ಬಸ್‌ಗಳು ಈಗ ಶಿರಾಡಿ ಘಾಟಿ ಹಾಗೂ ಸಂಪಾಜೆ ಘಾಟಿ ಮೂಲಕ ಸಾಗುವ ವಾಹನಗಳೂ ಚಾರ್ಮಾಡಿ ಘಾಟಿಯನ್ನು ಬಳಸಿದರೆ ಇಲ್ಲಿ ಸಂಚಾರ ಸಮಸ್ಯೆ ಕಟ್ಟಿಟ್ಟ ಬುತ್ತಿ’ ಎಂದು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಖಾಸಗಿ ಬಸ್‌ಗಳ ಸೇವೆ ರದ್ದು: ಖಾಸಗಿ ಬಸ್‌ಗಳು ಬೆಂಗಳೂರು– ಮಂಗಳೂರು ಸೇವೆಯನ್ನು ರದ್ದುಪಡಿಸಿವೆ. ಮುಂಗಡವಾಗಿ ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಹಣವನ್ನು ಮರಳಿಸಿವೆ. ಬಸ್‌ ಸೇವೆ ಸ್ಥಗಿತದಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಕೆಲವರು ಕೆಎಸ್‌ಆರ್‌ಟಿಸಿ ಬಸ್‌ಗಳ ಮೊರೆ ಹೋದರು.

‘ಬೆಂಗಳೂರಿಗೆ ಇಲ್ಲಿಂದ 18 ಬಸ್‌ಗಳು ನಿತ್ಯ ಸಂಚರಿಸುತ್ತಿದ್ದವು. ಅವುಗಳೆಲ್ಲದರ ಸಂಚಾರ ರದ್ದುಪಡಿಸಿ ಪ್ರಯಾಣಿಕರಿಗೆ ಹಣ ಮರಳಿಸಿದ್ದೇವೆ’ ಎಂದು ಸುಗಮ ಟ್ರಾವೆಲ್ಸ್‌ ಸಂಸ್ಥೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ನಮ್ಮ ಸಂಸ್ಥೆಯ ಬಸ್‌ಗಳ ಮಂಗಳೂರು–ಬೆಂಗಳೂರು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ’ ಎಂದು ಎಸ್‌ಆರ್‌ಎಸ್‌ ಟ್ರಾವೆಲ್ಸ್ ಸಂಸ್ಥೆಯ ಸಿಬ್ಬಂದಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.