
ಪುತ್ತೂರು: ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬರಹಗಳ ಮೂಲಕ ನಿರಂಜನ ಅವರು ತಮ್ಮದೇ ಛಾಪು ಮೂಡಿಸಿದ್ದರು. ಸಂಪೂರ್ಣವಾಗಿ ಎಡ ಭಾಗದ ಸ್ವಾಧೀನ ಕಳೆದುಕೊಂಡಿದ್ದರೂ ನಿರಂಜನ ಅವರು ಹಲವು ಕೃತಿ ರಚಿಸಿರುವುದು ಅವರ ಛಲ ಹಾಗೂ ಜೀವನೋತ್ಸಾಹಕ್ಕೆ ನಿದರ್ಶನ ಎಂದು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಹೇಳಿದರು.
ಪುತ್ತೂರಿನ ಸೇಂಟ್ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ನಡೆದ ‘ನಿರಂಜನ- 100ರ ನೆನಪು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಫಾ.ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಸಾಹಿತ್ಯ ಎಂಬುದು ಮಾನಸಿಕವಾಗಿ ಕುಗ್ಗಿರುವ ಮನುಷ್ಯನ ಮನಸ್ಸನ್ನು ಸ್ಥಿಮಿತಕ್ಕೆ ತರುವಲ್ಲಿ ಸಹಕಾರಿಯಾಗುವ ಒಂದು ಸಾಧನ. ಭಾವನಾತ್ಮಕ ಬೆಳವಣಿಗೆಗೆ ಬರವಣಿಗೆ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು, ಪುಸ್ತಕಗಳನ್ನು ಓದುವುದು ಸಹಕಾರಿ ಎಂದರು.
ಕಾಲೇಜಿನ ಉಪಪ್ರಾಂಶಪಾಲ ವಿಜಯಕುಮಾರ್ ಎಂ., ಪರೀಕ್ಷಾಂಗ ಕುಲಸಚಿವ ವಿನಯಚಂದ್ರ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ರಾಧಾಕೃಷ್ಣ ಗೌಡ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಾಸುದೇವ ಎನ್., ಕನ್ನಡ ವಿಭಾಗದ ಉಪನ್ಯಾಸಕಿಯರಾದ ಪ್ರಶಾಂತಿ, ಪ್ರತಿಭಾ ಶೆಟ್ಟಿ ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ ಸ್ವಾಗತಿಸಿ, ಶಿಬ್ಲಾ ವಂದಿಸಿದರು. ವಿಂಧ್ಯಾಶ್ರೀ ರೈ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.