
ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಪಣಂಬೂರಿನ ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ನ.13ರಂದು ಏರ್ಪಡಿಸಲಾಗಿದೆ. ಕೇಂದ್ರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೊನೋವಾಲ್ ಅವರು ₹1500 ಕೋಟಿ ಮೊತ್ತದ 20 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಎನ್‌ಎಂಪಿಎ ಉಪಾಧ್ಯಕ್ಷೆ ಎಸ್.ಶಾಂತಿ, ‘ಸರ್ಬಾನಂದ ಸೊನೋವಾಲ್ ಅವರು ಗುರುವಾರ 2.30ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರದ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮತ್ತು ರಾಜ್ಯದ ಮೀನುಗಾರಿಕಾ, ಬಂದರು, ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ ಭಾಗವಹಿಸಲಿದ್ದಾರೆ’ ಎಂದರು.
‘ಎನ್‌ಎಂಪಿಎ 50 ವರ್ಷಗಳಲ್ಲಿ ನಡೆದು ಬಂದ ಹಾದಿಯ ಚಿತ್ರಣವನ್ನು ಈ ಕಾರ್ಯಕ್ರಮ ಕಟ್ಟಿಕೊಡಲಿದೆ. ಈ ಪಯಣದ ಮೈಲಿಗಲ್ಲುಗಳು, ಭವಿಷ್ಯದ ಅಭಿವೃದ್ಧಿ ಯೋಜನೆಗಳು ಮತ್ತು ಸಮುದ್ರಯಾನ ಕ್ಷೇತ್ರಕ್ಕೆ, ರಾಜ್ಯದ ಮತ್ತು ಈ ನಗರದ ಅಭಿವೃದ್ಧಿಗೆ ಎನ್‌ಎಂಪಿಎ ಕೊಡುಗೆಗಳ ಕುರಿತ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ನವಮಂಗಳೂರು ಬಂದರಿನ ಒಳಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿದೆ. ‘ಜನರ ಬಳಿಗೆ ಬಂದರು' ಪರಿಕಲ್ಪನೆಯಡಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ’ ಎಂದು ತಿಳಿಸಿದರು.
ನವೀಕೃತ ಕೆ.ಕೆ. ಗೇಟ್‌ಗೆ (ಕೂರಿ ಕಟ್ಟ ಗೇಟ್) ರಾಣಿ ಅಬ್ಬಕ್ಕ ಹೆಸರು ನಾಮಕರಣ ಮಾಡಲಾಗುತ್ತಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಎನ್‌ಎಂಪಿಎ ಉಪ ಸಂರಕ್ಷಣಾಧಿಕಾರಿ ಮನೋಜ್ ಜೋಶಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.