ಮಂಗಳೂರು: ಧಾರ್ಮಿಕ ಹಬ್ಬಗಳು ಹಾಗೂ ಆ ಪ್ರಯುಕ್ತ ನಡೆಯುವ ಮೆರವಣಿಗೆ, ಶೋಭಾಯಾತ್ರೆಗಳ ಸಂದರ್ಭದಲ್ಲಿ ಶಾಂತಿ–ಸುರಕ್ಷತೆ ದೃಷ್ಟಿಯಿಂದ ನಗರ ಪೊಲೀಸ್ ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಳೆದಿರುವ ಕಠಿಣ ನಿಲುವು ಪರ– ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
‘ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು 2000’ ಪ್ರಕಾರ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ ಕಲಾವಿದರ, ದೀಪಾಲಂಕಾರ, ಧ್ವನಿವರ್ಧಕ, ಶಾಮಿಯಾನ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಒಂದು ವರ್ಗ ಆರೋಪಿಸುತ್ತಿದೆ. ಡಿ.ಜೆ. ಸದ್ದಿನ ಅಬ್ಬರದಲೆಯಲ್ಲಿ ಕಳೆದೇ ಹೋಗಿದ್ದ ಈ ನೆಲದ ಕಲಾ ಪ್ರಕಾರಗಳಿಗೆ ಈಗ ಮತ್ತೆ ಬೇಡಿಕೆ ಕುದುರಿದೆ ಎಂದೂ ಕೆಲ ಕಲಾವಿದರು ವಾದಿಸುತ್ತಿದ್ದಾರೆ.
ಮಾರ್ಗಸೂಚಿಯಲ್ಲೇನಿತ್ತು:
ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯ. ಸಂಚಾರ ಮಾರ್ಗ, ಸಮಯ ಪಾಲನೆ ಮತ್ತು ಧ್ವನಿ ನಿಯಂತ್ರಣ ಸಂಬಂಧಿ ಷರತ್ತುಗಳನ್ನು ಪಾಲಿಸಲೇಬೇಕು. ರಾತ್ರಿ 11.30ರ ನಂತರ ಮೆರವಣಿಗೆಗೆ ಅವಕಾಶವಿಲ್ಲ. ಡಿ.ಜೆ, ಜೋರು ಸದ್ದುಂಟುಮಾಡುವ ಧ್ವನಿವರ್ಧಕ ಬಳಕೆ ನಿಷೇಧ. ಧರ್ಮಗಳ ನಡುವೆ ದ್ವೇಷ ಬಿತ್ತುವ ಅಂಶಗಳು ಎಲ್ಲೂ ಇರಬಾರದು. ಧ್ವನಿವರ್ಧಕ ಬಳಕೆಗೆ ಮುಂಚಿತ ಅನುಮತಿ ಕಡ್ಡಾಯ. ಷರತ್ತಿನ ಪ್ರಕಾರ ಸಮಯ ಪಾಲಿಸದಿದ್ದರೆ ಕ್ರಮ ಅನಿವಾರ್ಯ ಎಂದು ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿತ್ತು. ಆ ಬಳಿಕ ಜಿಲ್ಲೆಯಲ್ಲಿ ಮೊಹರಂ, ಶ್ರೀಕೃಷ್ಣ ಜನ್ಮಾಷ್ಠಮಿ ಮತ್ತು ಮೊಸರು ಕುಡಿಕೆ , ಈದ್ ಮಿಲಾದ್, ಗಣೇಶೋತ್ಸವ ಕಾರ್ಯಕ್ರಮಗಳು ಸಾಂಗವಾಗಿ ನಡೆದಿವೆ. ಮಂಗಳೂರಿನ ಉರ್ವದಲ್ಲಿ ಮೊಸರು ಕುಡಿಕೆ ಹಬ್ಬದಲ್ಲಿ ಡಿ.ಜೆ. ಬಳಸಿದ್ದಕ್ಕೆ ಎಫ್‌ಐಆರ್ ದಾಖಲಾಗಿದೆ. ಬಂಟ್ವಾಳ ತಾಲ್ಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರದಲ್ಲಿ ಅನುಮತಿ ಪಡೆಯದೇ ಆಯೋಜಿಸಿದ್ದ ಯಕ್ಷಗಾನವನ್ನು ಪೊಲೀಸರು ನಿಲ್ಲಿಸಿದ್ದಾರೆ. ಸುಬ್ರಹ್ಮಣ್ಯದಲ್ಲಿ ಗಣೇಶೋತ್ಸವ ಸಲುವಾಗಿ ಹಮ್ಮಿಕೊಂಡಿದ್ದ ನಾಟಕವನ್ನು ರಾತ್ರಿ 10ರ ಬಳಿಕ ನಿಲ್ಲಿಸುವಂತೆ ಪೊಲೀಸರು ಕರೆ ಮಾಡಿ ಸೂಚಿಸಿದ್ದಾರೆ.
ಈ ಘಟನೆಗಳ ಬೆನ್ನಲ್ಲೇ, ‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಕಲೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಪಡಿಸಲಾಗುತ್ತಿದೆ’ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಆರೋಪಿಸಿವೆ. ಧಾರ್ಮಿಕ ಕಾರ್ಯಕ್ರಮಗಳ ಮೆರವಣಿಗೆ, ಯಕ್ಷಗಾನ, ನಾಟಕ, ದೈವಕೋಲ ಮೊದಲಾದ ಧಾರ್ಮಿಕ– ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊದಲಿನಂತೆ ಆಯೋಜಿಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿವೆ.
‘ಯಕ್ಷಗಾನ, ನಾಟಕ ಹಾಗೂ ದೈವ ಕೋಲ, ನೇಮಗಳನ್ನು ರಾತ್ರಿ ಪೂರ್ತಿ ನಡೆಸಲಾಗುತ್ತದೆ. ಜನಸಂಖ್ಯೆ ಹೆಚ್ಚಾಗಿದ್ದರಿಂದ ಧ್ವನಿವರ್ಧಕ ಬಳಕೆ ಈಗ ಅನಿವಾರ್ಯ. ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಸಲು ಅವಕಾಶ ನೀಡದಿದ್ದರೆ ಇಂತಹ ಆಚರಣೆ/ ಕಾರ್ಯಕ್ರಮಗಳನ್ನೇ ನೆಚ್ಚಿಕೊಂಡು ಬದುಕುವವರಿಗೆ ಸಮಸ್ಯೆಯಾಗುತ್ತದೆ’ ಎಂಬುದು ಅವರ ವಾದ.
ಇದನ್ನು ಪೊಲೀಸ್ ಅಧಿಕಾರಿಗಳು ಒಪ್ಪುವುದಿಲ್ಲ. ‘ನಾವು ಎಲ್ಲೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಅಡ್ಡಿ ಪಡಿಸಿಲ್ಲ. ನಿಯಮ ಮೀರಿ ಕಾರ್ಯಕ್ರಮ ಏರ್ಪಡಿಸಿದಾಗ ಹಾಗೂ ಶಬ್ದ ಮಾಲಿನ್ಯದ ಸಾರ್ವಜನಿಕರಿಗೆ ತೊಂದರೆ ಉಂಟಾದ ಬಗ್ಗೆ ದೂರು ಬಂದಾಗ ಕ್ರಮ ಅನಿವಾರ್ಯ’ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
‘ಕಮಿಷನರೇಟ್ ವ್ಯಾಪ್ತಿಯ ಎಲ್ಲ ಗಣೇಶೋತ್ಸವದ ಮೆರವಣಿಗೆಗಳೂ ಸಾಂಗವಾಗಿ ನಡೆದಿವೆ. ನಗರದ ನೆಹರೂ ಮೈದಾನದ ಗಣೇಶೋತ್ಸವ ಮೆರವಣಿಗೆ ರಾತ್ರಿ 10ರ ಬಳಿಕವೂ ನಡೆದಿದೆ. ಹಿಂದೆಲ್ಲ ಇಲಾಖೆಯ ಅನುಮತಿ ಪಡೆಯದೆಯೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಅಲ್ಲೆನಾದರೂ ಗಲಾಟೆ ನಡೆದರೆ, ಅದಕ್ಕೆ ಯಾರು ಹೊಣೆ. ಹಾಗಾಗಿ ಯಾರು ಏನೇ ಕಾರ್ಯಕ್ರಮ ಮಾಡುವುದಿದ್ದರೂ ಕಾನೂನು ಪ್ರಕಾರ ಮಾಡಬೇಕು ಎಂದಷ್ಟೇ ಸೂಚಿಸಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದರು.
‘ನಮ್ಮಲ್ಲಿ ಧ್ವನಿಯ ಮಟ್ಟವನ್ನು ಪರಿಶೀಲಿಸುವ ಸಾಧನವೂ ಇದೆ. ಕಾರ್ಯಕ್ರಮದ ಸ್ಥಳದಲ್ಲಿ ಎಷ್ಟು ಡೆಸಿಬಲ್ ಧ್ವನಿ ಇದೆ ಎಂಬುದನ್ನು ಪರಿಶೀಲಿಸಿದ ಬಳಿಕವೇ ಪೊಲೀಸರು ನಿಯಮ ಉಲ್ಲಂಘನೆ ಕುರಿತು ಕ್ರಮಕೈಗೊಂಡಿದ್ದಾರೆ‘ ಎಂದು ಅವರು ಧ್ವನಿಮಾಪಕ ಯಂತ್ರವನ್ನೂ ಪ್ರದರ್ಶಿಸಿದರು.
‘ಒಳಾಂಗಣದ ಕಾರ್ಯಕ್ರಮಗಳಿಗೆ ನಿರ್ಬಂಧವಿಲ್ಲ. ಸಾರ್ವಜನಿಕವಾಗಿ ಆಚರಿಸುವ ಕಾರ್ಯಕ್ರಮದಿಂದ ಬೇರೆಯವರಿಗೆ ತೊಂದರೆ ಆಗಬಾರದು. ಯಕ್ಷಗಾನ, ನಾಟಕ ಏರ್ಪಡಿಸಬಾರದು ಎಂದು ನಾವು ಹೇಳಿಲ್ಲ. ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ ಎಂದು ತಿಳಿಸಿ ಆಯೋಜಕರು ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಬೇಕು. ಠಾಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಎಷ್ಟು ಧ್ವನಿ ವರ್ಧಕ ಬಳಸಬೇಕಾಗುತ್ತದೆ ಎಂಬುದನ್ನು ನೋಡಿಕೊಂಡು, ಸೂಕ್ತ ಷರತ್ತು ವಿಧಿಸಿ ಠಾಣಾಧಿಕಾರಿ ಅನುಮತಿ ನೀಡುತ್ತಾರೆ. 100 ಜನ ಸೇರಬಹುದಾದ ಕಾರ್ಯಕ್ರಮಕ್ಕೆ ಸಾವಿರಾರು ಜನ ಸೇರುತ್ತಾರೆ ಎಂದು ಬಿಂಬಿಸಿ ಅನುಮತಿ ಪಡೆಯಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ಹಿಂದೂ ಯುವಸೇನೆ ವತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ
ನಗರದಲ್ಲಿ ಪ್ರತಿ ಬೀದಿಯಲ್ಲೂ ಆಸ್ಪತ್ರೆಗಳಿವೆ. ಶಬ್ದ ಮಾಲಿನ್ಯದ ಬಗ್ಗೆ ರೋಗಿಗಳಿಂದ ಹಿರಿಯ ನಾಗರಿಕರಿಂದ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಂದ ದೂರು ಬಂದಾಗ ಕ್ರಮ ಕೈಗೊಳ್ಳುವುದು ಅನಿವಾರ್ಯಸುಧೀರ್ ಕುಮಾರ್ ರೆಡ್ಡಿ ಮಂಗಳೂರು ಪೊಲೀಸ್ ಕಮಿಷನರ್
ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿ ನಿಯಮಗಳು ಎಲ್ಲ ಧರ್ಮಗಳ ಆಚರಣೆಗಳಿಗೂ ಅನ್ವಯವಾಗುತ್ತವೆ. ಯಾರೇ ನಿಯಮ ಉಲ್ಲಂಘಿಸಿದರೂ ಅವರ ಧರ್ಮ ನೋಡದೇ ಮುಲಾಜಿಲ್ಲದೇ ಕ್ರಮ ವಹಿಸಲಾಗುತ್ತಿದೆ.ಡಾ.ಅರುಣ್ ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ನೆಲದ ಕಲಾ ಪ್ರಕಾರಗಳಿಗೆ ಹೆಚ್ಚಿದ ಬೇಡಿಕೆ’ ಮೆರವಣಿಗೆಗಳಲ್ಲಿ ಡಿ.ಜೆ. ಹಾವಳಿ ಈಚೆಗೆ ಹಚ್ಚಾಗಿತ್ತು. ಅದರ ಕಿವಿಗಡಚಿಕ್ಕುವ ಧ್ವನಿಯ ಅಬ್ಬರಕ್ಕೆ ನಮ್ಮ ನೆಲದ ಜಾನಪದ ಕಲಾಪ್ರಕಾರಗಳು ಕಳೆಗುಂದುವಂತಾಗಿತ್ತು. ಕೇವಲ ತಾಸೆ ಕೊಳಲು ಡೋಲು ಬಳಸುವ ಕಂಗೀಲು ಕುಣಿತ ಕಣ್ಣಿಗೂ ತಂಪು ಕಿವಿಗೂ ಇಂಪು. ಡಿ.ಜೆ ಹಾವಳಿಯಿಂದ ಕಂಗೀಲುವಿನಂತಹ ಕಲಾಪ್ರಕಾರಗಳನ್ನು ಪ್ರದರ್ಶಿಸುವುದೇ ದುಸ್ತರವಾಗಿತ್ತು. ಡಿ.ಜೆ. ನಿಷೇಧಿಸಿದ್ದರಿಂದ ನಮ್ಮ ಕಲಾ ತಂಡದ ಕಂಗೀಲು ನವಿಲು ಕುಣಿತ ಹುಲಿವೇಷ ಚೆಂಡೆ ಗೊಂಬೆ ಕುಣಿತಗಳಿಗೆ ಈ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಬೇಡಿಕೆ ಹೆಚ್ಚಿದೆ.ಮೋಹನದಾಸ ಕೊಟ್ಟಾರಿ ಮುನ್ನೂರು ಶ್ರೀಶಾರದಾ ಆರ್ಟ್ಸ್ ಬಂಟ್ವಾಳ
‘ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿಲ್ಲ’ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ ಮಾಡಿರುವುದು ಹಾಗೂ ಡಿ.ಜೆ.ಗೆ ಹಾಗೂ ಕಿವಿಗಡಚಿಕ್ಕುವಂತೆ ಧ್ವನಿ ವರ್ಧಕ ಬಳಸಲು ಅವಕಾಶ ಕಲ್ಪಿಸದೇ ಇರುವುದು ಸ್ವಾಗತಾರ್ಹ ಬೆಳವಣಿಗೆ. ಜಿಲ್ಲೆಯಲ್ಲಿ ಈ ವರ್ಷ 498 ಕಡೆ ಕಡೆ ಸಾರ್ವಜನಿಕ ಗಣೇಶೋತ್ಸವಗಳನ್ನು ನಡೆಸಲಾಗಿದೆ. ಗೊಂದಲಗಳಿಗೆ ಅವಕಾಶ ಇಲ್ಲದೇ ಎಲ್ಲೆಡೆಯೂ ಸಾಂಗವಾಗಿ ಗಣೇಶೋತ್ಸವ ನಡೆದಿದೆ. ಕೆಲವೆಡೆ ರಾತ್ರಿ 10 ಗಂಟೆ ಬಳಿವೂ ಹೆಚ್ಚು ಸದ್ದುಗದ್ದಲವಿಲ್ಲದೇ ಮೆರವಣಿಗೆಗಳು ನಡೆದಿವೆ. ಪೊಲೀಸರು ಎಲ್ಲೂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿಲ್ಲ. ದಸರಾ ಶೋಭಾಯಾತ್ರೆಯೂ ಚೆನ್ನಾಗಿ ನಡೆಯುತ್ತದೆ ಎಂಬ ವಿಶ್ವಾಸ ಇದೆ.ಮಲ್ಲಿಕಾ ಪ್ರಶಾಂತ್ ಪಕ್ಕಳ ಸದಸ್ಯರು ರಾಜ್ಯ ಧಾರ್ಮಿಕ ಪರಿಷತ್
ಶಬ್ದ ಮಾಲಿನ್ಯ–ನಿಯಮ ಏನನ್ನುತ್ತದೆ?
‘ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು 2000’ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪೊಲೀಸ್ ಕಮಿಷನರ್ ಅಥವಾ ಡಿಎಸ್‌ಪಿಗಿಂತ ಕೆಳಗಿನ ದರ್ಜೆಯವರಲ್ಲದ ಪೊಲೀಸ್ ಅಧಿಕಾರಿಗೆ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕ್ರಮವಹಿಸುವ ಅಧಿಕಾರವನ್ನು ವಹಿಸಲಾಗಿದೆ. ಅನುಮತಿ ಪಡೆಯದೇ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಸಭಾಂಗಣ ಅಥವಾ ಮುಚ್ಚಿದ ವಾತಾವರಣದ ಹೊರತಾಗಿ ಬೇರಾವುದೇ ಸ್ಥಳದಲ್ಲಿ ಧ್ವನಿ ವರ್ಧಕವನ್ನು ರಾತ್ರಿ ಹೊತ್ತು (ರಾತ್ರಿ 10ರಿಂದ ಬೆಳಿಗ್ಗೆ 6) ಬಳಸುವಂತಿಲ್ಲ. ಆದರೆ ಧಾರ್ಮಿಕ ಉತ್ಸವ ಹಾಗೂ ಸಾಂಸ್ಕೃತಿಕ ಆಚರಣೆಗಳ ಸಲುವಾಗಿ ವರ್ಷದಲ್ಲಿ ಗರಿಷ್ಠ 15 ದಿನಗಳ ಮಿತಿಯೊಂದಿಗೆ ನಿಯಮ ಸಡಿಲಿಸಿ ರಾತ್ರಿ 10ರಿಂದ ರಾತ್ರಿ 12 ಗಂಟೆವರೆಗೆ ಷರತ್ತುಬದ್ಧವಾಗಿ ಧ್ವನಿವರ್ಧಕ ಬಳಕೆಗೆ ಅವಕಾಶ ಕಲ್ಪಿಸಬಹುದು. ಆಲ್ಲೂ ಶಬ್ದವು ನಿಗದಿತ ಮಿತಿಗಿಂತ 10 ಡೆಸಿಬಲ್‌ಗಿಂತ ಹೆಚ್ಚು ಇರುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.