ADVERTISEMENT

ಉಜಿರೆಯಲ್ಲಿ ನರ್ಸಿಂಗ್, ಕೃಷಿ ಕಾಲೇಜು ಪ್ರಾರಂಭ: ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ ಲಕ್ಷದೀಪೋತ್ಸವ; ಸಾವಿರಾರು ಭಕ್ತರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:21 IST
Last Updated 16 ನವೆಂಬರ್ 2025, 6:21 IST
ನೃತ್ಯ ಭಜನೆ
ನೃತ್ಯ ಭಜನೆ   

ಉಜಿರೆ: ಧರ್ಮಸ್ಥಳದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುವುದು. ನೂರು ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ. ಕೃಷಿ ಕಾಲೇಜಿಗಾಗಿ ನೂರು ಎಕರೆ ಜಾಗ ದೊರಕಿದಲ್ಲಿ ತಕ್ಷಣವೇ ಕಾಲೇಜು ಸ್ಥಾಪನೆಯ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

ಲಕ್ಷದೀಪೋತ್ಸವ ಅಂಗವಾಗಿ ಶನಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸಾವಿರಾರು ಪಾದಯಾತ್ರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ತನ್ನ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕರು ತೋರುವ ಪ್ರೀತಿ-ವಿಶ್ವಾಸ, ಭಕ್ತಿ, ಶ್ರದ್ಧೆ ಮತ್ತು ಗೌರವ ಹಾಗೂ ಸದಾ ನಿಮ್ಮ ಜತೆ ಇದ್ದೇವೆ ಎಂಬ ಭಕ್ತರ ಭರವಸೆ ತನಗೆ ಹೆಚ್ಚಿನ ಸೇವಾ ಕಾರ್ಯ ಮಾಡಲು ಉತ್ಸಾಹ, ಪ್ರೇರಣೆ ಮತ್ತು ನವ ಚೈತನ್ಯ ನೀಡಿದೆ’ ಎಂದು ಅವರು ಹೇಳಿದರು.

ADVERTISEMENT

ಪ್ರಸ್ತುತ ಜನರಲ್ಲಿ ಅನೇಕ ಸಂದೇಹಗಳು, ಸಂಶಯಗಳು ಮೂಡಿಬಂದು ಅನಾವಶ್ಯಕ ಅಪಾದನೆಗಳು ಕೇಳಿ ಬರುತ್ತಿವೆ. ಆದರೆ, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಎಲ್ಲಾ ಭಕ್ತರ ಪ್ರೀತಿ-ವಿಶ್ವಾಸದಿಂದ ಸರ್ವ ಆಪಾದನೆಗಳೂ ನಿವಾರಣೆಯಾಗಿ ತಾನು ಸಂತೋಷ ಮತ್ತು ತೃಪ್ತಿಯಿಂದ ಇದ್ದೇನೆ ಎಂದರು.

ಪಾದಯಾತ್ರೆಯು ಲಕ್ಷದೀಪೋತ್ಸವದ ಸಂಪ್ರದಾಯವಾಗಿ ಬೆಳೆದು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.  

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬದಲಾದ ಇಂದಿನ ಭಾರತದಲ್ಲಿ ನಮ್ಮತನವನ್ನು ಗುರುತಿಸಿ, ಉಳಿಸಿಕೊಳ್ಳಲು ಸಾಮೂಹಿಕವಾಗಿ ಭಜನೆ, ಭೋಜನ, ಮಾತೃಭಾಷೆಯ ಬಳಕೆ, ಸಾತ್ವಿಕ ಉಡುಪುಗಳನ್ನು ಧರಿಸುವುದು, ತೀರ್ಥಯಾತ್ರೆ, ಪಾದಯಾತ್ರೆಯಂತಹ ಸತ್ಸಂಪ್ರದಾಯ ಬೆಳೆಸಿಕೊಂಡಾಗ ಸಭ್ಯ, ಸುಸಂಸ್ಖೃತ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಈ ದಿಸೆಯಲ್ಲಿ ಹೆಗ್ಗಡೆಯವರೇ ಸೂಕ್ತ ಸ್ಫೂರ್ತಿ ಹಾಗೂ ಪ್ರೇರಣೆ ನೀಡುವ ಆದರ್ಶ ಮಾರ್ಗದರ್ಶಕರು ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ,  ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಧಾರ್ಮಿಕ ಸಂಸ್ಥೆಯು ಸಾಮಾಜಿಕ ಬದ್ಧತೆಯೊಂದಿಗೆ ಲೋಕಕಲ್ಯಾಣಕ್ಕಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ಹೆಗ್ಗಡೆಯವರು ವಿಶ್ವಕ್ಕೆ ಮಾದರಿ ವ್ಯಕ್ತಿ ಎಂದು ಬಣ್ಣಿಸಿದರು.

ಡಿ.ಹರ್ಷೇಂದ್ರ ಕುಮಾರ್, ಹೆಗ್ಗಡೆಯವರ ಕುಟುಂಬದವರು, ಸೋನಿಯಾ ಯಶೋವರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.

ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ಪ್ರಸಾದವನ್ನು ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಅವರು ವಿರೇಂದ್ರ ಹೆಗ್ಗಡೆ ಅವರಿಗೆ ನೀಡಿದರು.

ಉಜಿರೆಯ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಪಾದಯಾತ್ರಿಗಳನ್ನು ಧರ್ಮಸ್ಥಳದಲ್ಲಿ ಪ್ರವೇಶ ದ್ವಾರದ ಬಳಿ ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು
ಪಾದಯಾತ್ರಿಗಳನ್ನು ಧರ್ಮಸ್ಥಳದಲ್ಲಿ ಪ್ರವೇಶ ದ್ವಾರದ ಬಳಿ ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು
ಸಮಾರಂಭ
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.