ADVERTISEMENT

ದ.ಕ: OBC ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯ 2,847 ವಿದ್ಯಾರ್ಥಿಗಳಿಗಿಲ್ಲ ಸೀಟು

ಪ್ರವೀಣ್‌ ಕುಮಾರ್‌ ಪಿ.ವಿ
Published 8 ಫೆಬ್ರುವರಿ 2024, 6:56 IST
Last Updated 8 ಫೆಬ್ರುವರಿ 2024, 6:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಲಭ್ಯ ಇರುವ ಸೀಟುಗಳಿಗಿಂತ ದುಪ್ಪಟ್ಟು ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿದ್ದು, ಶೇ 50ಕ್ಕೂ ವಿದ್ಯಾರ್ಥಿಗಳು ಈ ಹಾಸ್ಟೆಲ್‌ಗಳಲ್ಲಿ ಸೀಟು ಪಡೆಯಲು ಸಾಧ್ಯವಾಗಿಲ್ಲ.

2023–24ನೇ ಸಾಲಿನಲ್ಲಿ ಈ ವಿದ್ಯಾರ್ಥಿನಿಲಯಗಳಲ್ಲಿ ಈಚೆಗೆ ಸೀಟು ಹಂಚಿಕೆಯಾಗಿದ್ದು, ಪ್ರವೇಶ ಬಯಸಿದ್ದ 2,847 ವಿದ್ಯಾರ್ಥಿಗಳಿಗೆ ಸೀಟು ನಿರಾಕರಿಸಲಾಗಿದೆ.

ADVERTISEMENT

ಇಲಾಖೆಯ ಒಟ್ಟು 54 ವಿದ್ಯಾರ್ಥಿ ನಿಲಯಗಳು ಜಿಲ್ಲೆಯಲ್ಲಿವೆ. ಇವುಗಳಲ್ಲಿ ಸುಮಾರು 3000 ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಇದೆ. ಈ ಹಾಸ್ಟೆಲ್‌ಗಳಲ್ಲಿ 2023–24ನೇ ಸಾಲಿನಲ್ಲಿ ವಸತಿ ವ್ಯವಸ್ಥೆ ಒದಗಿಸಲು ಹಿಂದುಳಿದ ಜಾತಿಗಳ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಂದ 2023ರ ಡಿಸೆಂಬರ್‌ನಲ್ಲಿ ಇಲಾಖೆಯು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಕೆಗೆ ಡಿ.22ರವರೆಗೆ ಕಾಲಾವಕಾಶ ನೀಡಲಾಗಿತ್ತು. 

‘ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ನಡೆಸಲಾಗುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಿಗೆ ಹೊಸತಾಗಿ ಪ್ರವೇಶ ಬಯಸಿ 5,416 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 2,569 ಮಂದಿಗೆ ಅವರು ಬಯಸಿದ ಹಾಸ್ಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ’ ಎಂದು ಹಿಂದುಳಿದ ಮತ್ತು ಇತರೆ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್‌ ಕುಮಾರ್‌ ’ಪ್ರಜಾವಾಣಿ‘ಗೆ ತಿಳಿಸಿದರು.

’ಈ ಹಾಸ್ಟೆಲ್‌ಗಳಲ್ಲಿ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿ ತಿಂಗಳಿಗೆ ₹1,500 ಒದಗಿಸಲಾಗುತ್ತದೆ. ಅರ್ಜಿ ಹಾಕಿಯೂ ಹಾಸ್ಟೆಲ್‌ಗಳಲ್ಲಿ ಸೀಟು ಸಿಗದ ವಿದ್ಯಾರ್ಥಿಗಳಿಗೆ ವರ್ಷದ 10 ತಿಂಗಳು ಈ ಸೌಲಭ್ಯ ಸಿಗಲಿದೆ. ಒಂದು ವೇಳೆ ಹಾಸ್ಟೆಲ್‌ನಲ್ಲಿ ಸೀಟು ಮಂಜೂರಾದ ವಿದ್ಯಾರ್ಥಿ ಅಲ್ಲಿ ಉಳಿದುಕೊಳ್ಳಲು ನಿರಾಕರಿಸಿದರೆ, ಅವರಿಗೆ ವಿದ್ಯಾಸಿರಿ ಯೋಜನೆಯಡಿ ಸೌಕರ್ಯ ಸಿಗದು’ ಎಂದರು.

‘ನಮ್ಮದು ಬಡ ಕುಟುಂಬ. ಬ್ಯಾಂಕ್‌ನಲ್ಲಿ ಸಾಲ ಮಾಡಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಪಡೆಯುತ್ತಿದ್ದೇನೆ. ಕಾಲೇಜಿನ ವಿದ್ಯಾರ್ಥಿ ನಿಲಯಕ್ಕೆ ವರ್ಷಕ್ಕೆ ₹ 66 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ. ಕಾಲೇಜಿನ ಶುಲ್ಕದ ಜೊತೆಗೆ ವಿದ್ಯಾರ್ಥಿ ನಿಲಯದ ಶುಲ್ಕವನ್ನು ಭರಿಸುವ ಸಾಮರ್ಥ್ಯ ನನ್ನಲ್ಲಿಲ್ಲ. ಹಾಗಾಗಿ ಒಬಿಸಿ ಹಾಸ್ಟೆಲ್‌ಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ಸೀಟು ಸಿಕ್ಕಿಲ್ಲ. ವಿದ್ಯಾಸಿರಿಯ ಹಣವೂ ಬಾರದಿದ್ದರೆ ಶಿಕ್ಷಣ ಮುಂದುವರಿಸುವುದು ಬಹಳ ಕಷ್ಟವಾಗುತ್ತದೆ’ ಎಂದು ವಾಮಂಜೂರಿನ ಕಾಲೇಜೊಂದರ ವಿದ್ಯಾರ್ಥಿ ಕಾರ್ತಿಕ್‌ ’ಪ್ರಜಾವಾಣಿ‘ ಜೊತೆ ಅಳಲು ತೋಡಿಕೊಂಡರು.

’ನಾನು ಕಳೆದ ವರ್ಷ ಹಿಂದುಳಿದ ವರ್ಷಗಳ ಹಾಸ್ಟೆಲ್‌ಗೆ ಅರ್ಜಿ ಹಾಕಿದ್ದೆ. ಆದರೆ ಸೀಟು ಮಂಜೂರಾಗಿರಲಿಲ್ಲ. ವಿದ್ಯಾಸಿರಿ ಯೋಜನೆಯಡಿಯೂ ಹಣ ಸಿಕ್ಕಿಲ್ಲ. ಈ ವರ್ಷ ಮತ್ತೆ ಅರ್ಜಿ ಹಾಕಿದ್ದೆ. ಈ ಸಲವೂ ಸೀಟು ಸಿಕ್ಕಿಲ್ಲ. ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಇನ್ನೊಬ್ಬ ವಿದ್ಯಾರ್ಥಿ ಒತ್ತಾಯಿಸಿದರು.

‘ಜಿಲ್ಲೆಯ ಎಂಜಿನಿಯರಿಂಗ್‌ ಕಾಲೇಜು ಹಾಗೂ ವೈದ್ಯಕೀಯ ಕಾಲೇಜು, ಅರೆವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಇತರ ಕೆಲವು ವೃತ್ತಿಪರ ಪದವಿ ಕೋರ್ಸ್‌ ಕಲಿಸುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಬರುತ್ತಾರೆ. ಹಾಗಾಗಿ ಇಲ್ಲಿ ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಲ್ಲಿ ಪ್ರವೇಶ ಬಯಸುವವರ ಸಂಖ್ಯೆಯೂ ಜಾಸ್ತಿ ಇದೆ. ವಿಶೇಷವಾಗಿ ನಗರಲ್ಲಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಇಲಾಖೆಯು ಪುರುಷರಿಗೆ 20 ಹಾಗೂ ಮಹಿಳೆಯರಿಗೆ 34 ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಈ ವರ್ಷ ಹೊಸತಾಗಿ ಸೇರ್ಪಡೆಗೊಳ್ಳುವ ಹಾಗೂ ಹಿಂದಿನ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,544 ಪುರುಷರಿಗೆ ಹಾಗೂ 4,482 ಮಹಿಳೆಯರಿಗೆ ವಸತಿ ವ್ಯವಸ್ಥೆ ಇದೆ.

ಗ್ರಾಮೀಣ ಹಾಸ್ಟೆಲ್; 400 ಸೀಟು ಉಳಿಕೆ
‘ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಒಬಿಸಿ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಲ್ಲಿ ಲಭ್ಯ ಇರುವಷ್ಟು ಸೀಟುಗಳು ಭರ್ತಿ ಆಗುತ್ತಿಲ್ಲ. ಈ ಹಾಸ್ಟೆಲ್‌ಗಳಲ್ಲಿ ಈ ವರ್ಷ ಸುಮಾರು 400 ಸೀಟುಗಳು ಖಾಲಿ ಉಳಿದಿವೆ. ಆದರೆ, ಈ ಸೀಟುಗಳನ್ನು ನಗರ ಪ್ರದೇಶದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದರೂ ಅವರಿಗೆ ಪ್ರಯೋಜನವಾಗುವುದಿಲ್ಲ’ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮತ್ತೆರಡು ಹಾಸ್ಟೆಲ್‌ ಮಂಜೂರು’

‘ಮಂಗಳೂರು ನಗರದಲ್ಲಿ ಮತ್ತೆ ಎರಡು ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳನ್ನು ಆರಂಭಿಸಲು ಈಚೆಗಷ್ಟೇ ಮಂಜೂರಾತಿ ಸಿಕ್ಕಿದೆ. ಪ್ರತಿ ಹಾಸ್ಟೆಲ್‌ನಲ್ಲೂ ತಲಾ 125 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದೆ. ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ಅವುಗಳನ್ನು ನಡೆಸಲಿದ್ದೇವೆ. ಒಂದರಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಹಾಗೂ ಇನ್ನೊಂದರಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಿದ್ದೇವೆ. ಈಗಾಗಲೇ ಅರ್ಜಿ ಸಲ್ಲಿಸಿ ಸೀಟು ಸಿಗದ ವಿದ್ಯಾರ್ಥಿಗಳಿಗೆ ಈ ಹಾಸ್ಟೆಲ್‌ಗಳಲ್ಲಿ ಅವಕಾಶ ಕಲ್ಪಿಸಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.