ADVERTISEMENT

ಮಾತೃವಂದನ ಫಲಾನುಭವಿಗಳಿಗೆ ಆನ್ಲೈನ್‌ ವಂಚಕರ ಕಾಟ

ಮಾಹಿತಿ ಸೋರಿಕೆ ಬಗ್ಗೆ ತನಿಖೆಗೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:56 IST
Last Updated 11 ಜುಲೈ 2025, 4:56 IST
ಸುದ್ದಿಗೋಷ್ಠಿಯಲ್ಲಿ ಆಶಾಲತಾ ಎಂ.ವಿ. ಮಾತನಾಡಿದರು. ಸುಜಾತಾ ಶೆಟ್ಟಿ, ಸುಜಾತಾ ರೈ, ವಿಶಾಲಾಕ್ಷಿ, ಭವಾನಿ ಹಾಗೂ ಜಯಶ್ರೀ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಆಶಾಲತಾ ಎಂ.ವಿ. ಮಾತನಾಡಿದರು. ಸುಜಾತಾ ಶೆಟ್ಟಿ, ಸುಜಾತಾ ರೈ, ವಿಶಾಲಾಕ್ಷಿ, ಭವಾನಿ ಹಾಗೂ ಜಯಶ್ರೀ ಭಾಗವಹಿಸಿದ್ದರು   

ಮಂಗಳೂರು: ಕೇಂದ್ರ ಸರ್ಕಾರದ ಮಾತೃವಂದನ ಫಲಾನುಭವಿಗಳ ದತ್ತಾಂಶ ಸೋರಿಕೆಯಾಗಿದ್ದು, ಅದನ್ನು ಆನ್‌ಲೈನ್ ವಂಚನೆ ನಡೆಸುವ ಕಂಪನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಫಲಾನುಭವಿಗಳಿಗೆ ಕರೆ ಮಾಡಿ,  ‘ಈ ಯೋಜನೆಯಡಿ ₹ 20 ಸಾವಿರ ಹಣಸಿಗಲಿದೆ. ಅದಕ್ಕಾಗಿ ನೀವು ಹಣ ಕಟ್ಟಬೇಕು’ ಎಂದು ಹೇಳಿ ವಂಚಿಸಲಾಗಿದೆ. ಇಂತಹ ಕರೆಗಳನ್ನು ನಂಬಿ ಕೆಲವರು ಹಣ ಕಳೆದುಕೊಂಡಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ  ಹಾಗೂ ಸಹಾಯಕಿಯರ ಸಂಘದ ಮಂಗಳೂರು ನಗರ ಘಟಕದ ಅಧ್ಯಕ್ಷೆ ಆಶಾಲತಾ ಎಂ.ವಿ, ‘ನಗರದ ಕುಳಾಯಿಯ  ಅಂಗನವಾಡಿ ವ್ಯಾಪ್ತಿಯಲ್ಲಿ ಮಾತೃವಂದನಾ ಯೋಜನೆಯ ನಾಲ್ವರು ಫಲಾನುಭವಿಗಳಿಗೆ ಆನ್‌ಲೈನ್ ವಂಚಕರಿಂದ ಕರೆಗಳು ಬಂದಿವೆ. ಆ ಪೈಕಿ ಒಬ್ಬ ಫಲಾನುಭವಿ, ವಂಚಕರು ಸೂಚಿಸಿದ ಖಾತೆಗೆ ₹4,598 ವರ್ಗಾಯಿಸಿದ್ದರು. ಬಳಿಕ ಆಕೆಯ ಖಾತೆಯಲ್ಲಿದ್ದ ₹ 44 ಸಾವಿರ ರೂಪಾಯಿಯೂ ಕಡಿತವಾಗಿದೆ.  ಪಾಂಡೇಶ್ವರದ ಫಲಾನುಭವಿಯೊಬ್ಬರು ಇಂತಹ ಕರೆಯನ್ನು ನಂಬಿ ₹ 6 ಸಾವಿರ ಹಣ ಪಾವತಿಸಿ ಮೋಸಹೋಗಿದ್ದಾರೆ. ಬೋಂದೆಲ್‌ನಲ್ಲಿ ನಾಲ್ವರು ಫಲಾನುಭವಿಗಳಿಗೆ ಇದೇ ರೀತಿ ಕರೆಗಳು ಬಂದಿವೆ’ ಎಂದು ಮಾಹಿತಿ ನೀಡಿದರು.

‘ಮಾತೃವಂದನ ಫಲಾನುಭವಿಗಳಿಗೆ ಈ ರೀತಿಯ ವಂಚನೆ  ತಿಳಿಸಿದ್ದೇವೆ. ಆದರೂ ಫಲಾನುಭವಿಗೆ ಸಂಬಂಧಿಸಿದ ವಿವರಗಳನ್ನು ವಂಚಕರಿಗೆ ತಿಳಿದಿರುವುದರಿಂದ ಕೆಲವು ಅಮಾಯಕರು  ವಂಚನೆಗೆ ಒಳಗಾಗುವ ಅಪಾಯವಿದೆ. ನಾವು ಈ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ವಿವರವನ್ನು ಪೋರ್ಟಲ್‌ನಲ್ಲಿ ತುಂಬಿದ್ದು ವಂಚಕರ ಕೈಗೆ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಸರ್ಕಾರ ತನಿಖೆ ಮಾಡಿಸಬೇಕು. ಇಂತಹ ವಂಚನೆ ಮರುಕಳಿಸದಂತೆ ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಮಾತೃವಂದನ ಯೋಜನೆಯಡಿ ಫಲಾನುಭವಿಗಳಿಗೆ ಮೊದಲ ಹೆರಿಗೆಗೆ ₹ 5ಸಾವಿರ ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣುಮಗು ಜನಿಸಿದರೆ ₹ 6ಸಾವಿರ ಸಿಗುತ್ತದೆ. ಹಣ ಕಳೆದುಕೊಂಡ ಕೆಲ ಫಲಾನುಭವಿಗಳು ಅದನ್ನು ಕಾರ್ಯಕರ್ತರೇ ನೀಡಬೇಕು ಎಂದು ಒತ್ತಾಯಿಸಿದ ಉದಾಹರಣೆಗಳಿವೆ, ನಮ್ಮದಲ್ಲದ ತಪ್ಪಿಗೆ ನಾವು ಜನರಿಂದ ಬೈಸಿಕೊಳ್ಳುವ ಪ್ರಮೇಯ ಎದುರಾಗಿದೆ’ ಎಂದರು.

ಬಿಎಲ್‌ಒ ಹೊಣೆ ಬೇಡ:

ಸಂಘದ ರಾಜ್ಯ ಘಟಕದ ಖಜಾಂಚಿ ವಿಶಾಲಾಕ್ಷಿ, ‘ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (ಬಿಎಲ್‌ಒ) ಸಿ ದರ್ಜೆಯ ನೌಕರರನ್ನೇ ನೇಮಿಸಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆ ಬಳಿಕವೂ ಕೆಲವೆಡೆ ಅಂಗನವಾಡಿ ಕಾರ್ಯಕರ್ತರನ್ನೇ ಬಿಎಲ್‌ಒ ಆಗಿ ನೇಮಿಸಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಬಿಎಲ್‌ಒ ಕರ್ತವ್ಯಕ್ಕೆ ನಮಗೆ ವರ್ಷಕ್ಕೆ ಕೇವಲ ₹ 7000 ನೀಡಲಾಗುತ್ತಿದೆ. ಇದನ್ನು ₹ 15 ಸಾವಿರಕ್ಕೆ ಹೆಚ್ಚಿಸಬೇಕು. ಅಥವಾ ನಮ್ಮನ್ನೂ ಸಿ ದರ್ಜೆ ನೌಕರರು ಎಂದು ಪರಿಗಣಿಸಬೇಕು. ಇಲ್ಲದಿದ್ದರೆ ನಮಗೆ ಬಿಎಲ್‌ಒ ಹೊಣೆಯಿಂದ ಮುಕ್ತಿ ನೀಡಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ಸಾಮೂಹಿಕವಾಗಿ ಪ್ರತಿಭಟನೆ ನಡೆಸುತ್ತೇವೆ’ ಎಂದು ತಿಳಿಸಿದರು.

‘ನಮಗೆ 3–6 ವರ್ಷಗಳ ಒಳಗಿನ ಮಕ್ಕಳ ಶಾಲಾ ಪೂರ್ವ ಶಿಕ್ಷಣ, ಇಲಾಖೆಗೆ ಸಂಬಂಧಿಸಿದ 40 ದಾಖಲಾತಿಗಳ ನಿರ್ವಹಣೆ, ತಾಯಂದಿರ ಸಭೆ, ಪೌಷ್ಟಿಕ ಆಹಾರ ಕಾರ್ಯಕ್ರಮ, ಬಾಲವಿಕಾಸ ಸಮಿತಿ ಸಭೆ, ಪೋಷಣ್ ಅಭಿಯಾನದ ಹೊಣೆ ಇದೆ. ಮಕ್ಕಳ ಮಾಹಿತಿಯನ್ನು ‘ಪೋಷಣ್ ಟ್ರ್ಯಾಕರ್‌’ನಲ್ಲಿ ಭರ್ತಿಮಾಡಬೇಕು. ಮನೆಗೆ ಆಹಾರ ವಿತರಿಸುವ ಫಲಾನುಭವಿಗಳ ಇ ಕೆವೈಸಿ, ಮುಖದ ಚಹರೆ ಸೆರೆ ಹಿಡಿದು ಅಪ್ಲೋಡ್ ಮಾಡಬೇಕು. ಕೆಲವು ಫಲಾನುಭವಿಗಳು ಒಟಿಪಿ ಹಂಚಿಕೊಳ್ಳುತ್ತಿಲ್ಲ. ಈ ಎಲ್ಲ ಹೊರೆಗಳ ನಡುವೆ ನಾವು ಬಿಎಲ್‌ಒ ಕರ್ತವ್ಯ ನಿರ್ವಹಿಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು. 

‘ಗರ್ಭಿಣಿಯರಿಗೆ ಮತ್ತು ಬಾಂಣತಿಯರಿಗೆ ನೀಡುವ ಮೊಟ್ಟೆಗೆ ಸರ್ಕಾರ ಮುಂಗಡ ಹಣ ನೀಡುತ್ತಿಲ್ಲ.  ಕೆಲ ಕಾರ್ಯಕರ್ತೆಯರು ಚಿನ್ನವನ್ನು ಅಡವಿಟ್ಟು ಮೊಟ್ಟೆ ವಿತರಿಸಿದ್ದಾರೆ. ಹಣ ಮರುಪಾವತಿಯಾಗುವಾಗ ಮೂರು ನಾಲ್ಕು ತಿಂಗಳು ಕಳೆಯುತ್ತಿದ್ದು, ಕಾರ್ಯಕರ್ತೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ‘ಪುಷ್ಟಿ’ ಆಹಾರವನ್ನು ಸೇವಿಸಲು ಮಕ್ಕಳು ಇಷ್ಟಪಡುತ್ತಿಲ್ಲ. ಫಲಾನುಭವಿಗಳ ಇ– ಕೆವೈಸಿಯನ್ನು ಅಪ್ಲೋಡ್‌ ಮಾಡಲು ಸರ್ವರ್ ಸಮಸ್ಯೆ ಇದೆ’ ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ  ಮಂಗಳೂರು ನಗರ ಘಟಕದ ಕಾರ್ಯದರ್ಶಿ ಸುಜಾತಾ ರೈ, ಖಜಾಂಚಿ ಸುಜಾತಾ ಶೆಟ್ಟಿ, ಜೊತೆಕಾರ್ಯದರ್ಶಿ ಜಯಶ್ರೀ, ಜಿಲ್ಲಾ ಘಟಕದ ಪ್ರತಿನಿಧಿ ಭವಾನಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.