ADVERTISEMENT

ಮೆಸ್ಕಾಂ ಅಧಿಕಾರಿಗಳ ಸಭೆ: 24 ಗಂಟೆಯೊಳಗೆ ವಿದ್ಯುತ್ ಸಮಸ್ಯೆ ಪರಿಹರಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 27 ಮೇ 2025, 13:26 IST
Last Updated 27 ಮೇ 2025, 13:26 IST
ಶಾಸಕ ಅಶೋಕ್‌ಕುಮಾರ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದರು
ಶಾಸಕ ಅಶೋಕ್‌ಕುಮಾರ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದರು   

ಪುತ್ತೂರು: ಮುರಿದು ಬಿದ್ದ ಕಂಬಗಳ ಮರುಜೋಡಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದರೂ ಕೆಲವು ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸಮಸ್ಯೆ ಪರಿಹಾರವಾಗಿಲ್ಲ. ವಿದ್ಯುತ್ ಕಂಬಗಳು ಮುರಿದು ಬಿದ್ದರೆ 24 ಗಂಟೆಯೊಳಗೆ ಸರಿಪಡಿಸಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಶಾಸಕ ಅಶೋಕ್‌ಕುಮಾರ್‌ ರೈ ಅಧಿಕಾರಿಗಳಿಗೆ ಸೂಚಿಸಿದರು.

ಮಳೆ-ಗಾಳಿಯಿಂದಾಗಿ ವಿವಿಧ ಕಡೆ ವಿದ್ಯುತ್ ಸಮಸ್ಯೆ ಉಂಟಾಗಿರುವ ಸಂಬಂಧ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಜೂನಿಯರ್ ಎಂಜಿನಿಯರ್‌ಗೋಳ ಸಭೆ ನಡೆಸಿ ಸೂಚನೆ ನೀಡಿದರು.

ಮಳೆಯಿಂದಾಗಿ ಏನೇ ಅನಾಹುತವಾದರೂ ಅದನ್ನು ದುರಸ್ತಿ ಮಾಡಿ ಜನರಿಗೆ ವಿದ್ಯುತ್ ನೀಡಬೇಕಾದುದು ನಿಮ್ಮ ಇಲಾಖೆಯ ಕರ್ತವ್ಯ. ನಾಲ್ಕು ದಿನಗಳಿಂದ ನನಗೆ ಪದೇ ಪದೇ ಕರೆಗಳು ಬರುತ್ತಿವೆ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಮೆಸ್ಕಾಂ ಇಇ ರಾಮಚಂದ್ರ ಅವರಿಗೆ ಸೂಚಿಸಿದರು.

ADVERTISEMENT

‘ನಾವು ನಮ್ಮ ಕೆಲಸ ಮಾಡಿದ್ದೇವೆ. ಮುರಿದು ಬಿದ್ದ ಕಂಬಗಳನ್ನು ಮರು ಜೋಡಿಸಿದ್ದೇವೆ. ಆದರೆ, ವಿದ್ಯುತ್ ಚಾರ್ಜ್‌ ಮಾಡುವಾಗ ಟ್ರಿಪ್ ಆಗುತ್ತಿದೆ. ಭಾರಿ ಮಳೆ ಇರುವ ಕಾರಣ ಕೆಲವು ಕಡೆ ಮರದ ಗೆಲ್ಲು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತಿದೆ. ಒಂದು ಕಡೆ ದುರಸ್ತಿಯಾಗುವಷ್ಟರಲ್ಲಿ ಇನ್ನೊಂದು ಭಾಗದಲ್ಲಿ ಕಂಬಗಳ ಮೇಲೆ ಮರ ಬಿದ್ದು ಮತ್ತೆ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಕೆಲವು ಕಡೆ ಮೂರು ದಿನಗಳಿಂದ ಸಮಸ್ಯೆಯಾಗಿದೆ’ ಎಂದು ರಾಮಚಂದ್ರ ಹೇಳಿದರು.

‘ಕಾರ್ಮಿಕರ ಕೊರತೆ, ವಾಹನದ ಕೊರತೆ, ಉಪಕರಣಗಳ ಕೊರತೆ ಇದ್ದರೆ ತಕ್ಷಣ ವ್ಯವಸ್ಥೆ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ಪರಿಹಾರ ನೀಡಲಾಗುವದು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ವಿದ್ಯುತ್ ಇಲ್ಲದಿದ್ದರೆ ಜನ ಕುಡಿಯುವ ನೀರಿಗೂ ತೊಂದರೆ ಅನುಭವಿಸುತ್ತಾರೆ. ತುರ್ತು ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರನ್ನು ಬಳಸಿಕೊಂಡು ಕೆಲಸ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕು. ಸಮಸ್ಯೆಯನ್ನು ಬಗೆಹರಿಸಲು ಗುತ್ತಿಗೆದಾರರು ಮೆಸ್ಕಾಂ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.