ಉಳ್ಳಾಲ: ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯೊಬ್ಬರ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಕಂಡುಕೊಂಡಿದ್ದಾರೆ.
ಅಂಕೋಲಾದ ಮಾಲ್ಗಾಂ ನಿವಾಸಿ ಸುಬ್ರಾಯ ವೆಂಕಟರಾಮ್ ಭಟ್ (49) ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ. ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯಲ್ಲಿ ದಾನ ಪ್ರಕ್ರಿಯೆ ನಡೆಯಿತು.
ಸುಬ್ರಾಯ ವೆಂಕಟರಾಮ್ ಭಟ್ ಅವರನ್ನು ಮೆದುಳಿನ ರಕ್ತಸ್ರಾವದಿಂದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.24ರಂದು ಆಸ್ಪತ್ರೆ ವೈದ್ಯರು ಮಿದುಳು ನಿಷ್ಕ್ರಿಯವೆಂದು ಘೋಷಿಸಿದ್ದರಿಂದ ವೆಂಕಟರಾಮ್ ಭಟ್ ಅವರ ಕುಟುಂಬಸ್ಥರು ಎಲ್ಲಾ ಅಂಗಾಂಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಶೆಟ್ಟಿ, ಚಿಕಿತ್ಸೆ ನೀಡಿದ ಡಾ.ಸುಧೀಂದ್ರ ಯು, ಡಾ.ಸುರೇಶ್ ಜಿ, ಕಸಿ ಸಂಯೋಜಕಿ ಅಕ್ಷತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಜೀವಸಾರ್ಥಕ ತಂಡ ಮತ್ತು ವಿವಿಧ ತಜ್ಞರ ಸಹಕಾರದಿಂದ ಅಂಗಾಂಗ ಬೇರ್ಪಡಿಸುವ ಕಾರ್ಯ ನಡೆಯಿತು.
ಎರಡು ಮೂತ್ರಪಿಂಡ ಮತ್ತು ಕಣ್ಣುಗಳನ್ನು ಹೊರತೆಗೆದು ಕಸಿ ಮಾಡಲು ಕ್ರಮ ಕೈಗೊಳ್ಳಲಾಯಿತು. ಅಲ್ಲದೇ ಮೂಳೆಗಳು ಹಾಗೂ ಸ್ನಾಯುರಜ್ಜುಗಳನ್ನು (ಫೀಮರ್, ಹೂಮರಸ್ ಹಾಗೂ ಅಚಿಲ್ಲೀಸ್ ಟೆಂಡನ್) ದಾನ ಮಾಡಲಾಯಿತು.
ರಾಜ್ಯದಲ್ಲಿ ಇದು ಎರಡನೇ ಬಾರಿಗೆ ಶವದ ಮೂಳೆ ಕೊಯ್ಯುವ ಪ್ರಕ್ರಿಯೆ ನಡೆದಿರುವುದು. ಮೊದಲ ಬಾರಿಗೆ ಕ್ಷೇಮ ಆಸ್ಪತ್ರೆಯಲ್ಲಿ ಡಾ.ವಿಕ್ರಮ್ ಶೆಟ್ಟಿ ನೇತೃತ್ವ ತಂಡ 2024ರ ಡಿಸೆಂಬರ್‌ನಲ್ಲಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.